ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ಪ್ರತ್ಯಕ್ಷನಾದ ಬ್ಲೇಡ್ ಬಾಬಾ

ಬಾಗಲಕೋಟೆ: ಸುಮಾರು ಒಂದೂವರೆ ದಶಕದ ಬಳಿಕ ಬ್ಲೇಡ್ ಬಾಬಾ ಎಂದು ಕರೆಸಿಕೊಳ್ಳುತ್ತಿದ್ದ ಅಸ್ಲಾಂಬಾಬಾ ಶಹಪುರಕರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ.

ಸಿಎಎ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಮುಂಭಾಗದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಬ್ಲೇಡ್ ಬಾಬಾ ಭಾಗಿಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ವೈದ್ಯಲೋಕಕ್ಕೆ ಸೆಡ್ಡು ಹೊಡೆದು ಬ್ಲೇಡ್ ನಿಂದ ಶಸ್ತ್ರ ಚಿಕಿತ್ಸೆ ಮಾಡುತ್ತೇನೆ ಎಂದು ಮುಗ್ಧ ಜನರನ್ನು ವಂಚಿಸುತ್ತಿದ್ದ. ಅಲ್ಲದೇ ಅಸ್ಲಾಂಬಾಬಾ ವಂಚನೆ ಬಗ್ಗೆ ಹಿಂದೆ ಬಾಗಲಕೋಟೆಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು.

2004ರಲ್ಲಿ ವೈದ್ಯಕೀಯ ರಂಗ ಹಾಗೂ ವಿವಿಧ ಸಂಘಟನೆಗಳಿಂದ ಬಾಬಾಗೆ ಬಹಿರಂಗ ಸವಾಲು ಹಾಕಿದ್ದರು. ಈ ಸವಾಲ್‍ಗೆ ಬೆದರಿದ್ದ ಬ್ಲೇಡ್ ಬಾಬಾ ಕಣ್ಮರೆ ಆಗಿದ್ದ. ಅಲ್ಲದೇ ವಂಚನೆ ಆರೋಪದ ಕಾರಣ ಬಾಬಾನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಹೀಗಾಗಿ ಬಾಬಾ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ದೆಹಲಿ, ಮುಂಬೈ, ಬೆಂಗಳೂರಲ್ಲಿ, ಸೊಲ್ಲಾಪುರದಲ್ಲಿ ಇದ್ದಾನೆ ಎಂದು ಗುಮಾನಿ ಇತ್ತು. ಜೊತೆಗೆ ಆಗಾಗ ಬಾಗಲಕೋಟೆಗೆ ಕದ್ದುಮುಚ್ಚಿ ಬಂದು ಹೋಗುತ್ತಾನೆ ಎಂದು ಹೇಳಲಾಗುತ್ತಿತ್ತು.

ಕೆಲ ತಿಂಗಳಿಂದ ಬಾಬಾ ಬಾಗಲಕೋಟೆಯಲ್ಲೆ ಇದ್ದಾನೆ ಎನ್ನಲಾಗಿತ್ತು. ಆದರೆ ಇಂದು ದಿಢೀರನೇ ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಬ್ಲೇಡ್ ಬಾಬಾ ಇಳಿದಿದ್ದಾನೆ. ಪೌರತ್ವ ಕಾಯ್ದೆ ವಿರೋಧಿಸಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ ಬ್ಲೇಡ್ ಬಾಬಾ, ಪೌರತ್ವ ಕಾಯ್ದೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತಿತರ ಕಡೆಯಿಂದ ಭಯೋತ್ಪಾದಕರ ಬಿಡಲ್ಲ ಎಂದು ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.

ಇದೇ ವೇಳೆ ತನ್ನ ಪ್ರಕರಣದ ಬಗ್ಗೆ ಮಾತನಾಡಿದ ಬಾಬಾ, ನನ್ನ ಆಸ್ತಿ ಮುಟ್ಟುಗೋಲು ವಿಚಾರ ನ್ಯಾಯಾಲಯದಲ್ಲಿದೆ. ಕಾನೂನು ಬಾಹಿರವಾಗಿ ತಾನು ಚಟುವಟಿಕೆ ಮಾಡಿದರೆ ಕ್ರಮ ಜರುಗಿಸಲಿ. ಸದ್ಯ ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಬಾಗಲಕೋಟೆಯಲ್ಲಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾನೆ.

Comments

Leave a Reply

Your email address will not be published. Required fields are marked *