ನಮ್ಮ ಯುವಕರಿಗೆ ಕೆಲಸ ಕೊಡಡಿದ್ರೆ ನಿಮ್ಗೆ ನೀರು ಬಿಡಲ್ಲ: ಶಾಸಕ ಅಮೃತ ದೇಸಾಯಿ

-ಇಬ್ಬರು ಸಚಿವರ ಎದುರಲ್ಲೇ ಖಡಕ್ ಮಾತು

ಧಾರವಾಡ: ಸರ್ಕಾರದ ಜಲಶುದ್ಧೀಕರಣ ಘಟಕದಲ್ಲಿ ಸ್ಥಳೀಯ ಯುವಕರಿಗೆ ನೌಕರಿ ಕೊಟ್ಟರೇ ಮಾತ್ರ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಬಿಡೋದಾಗಿ ತಮ್ಮದೇ ಪಕ್ಷದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಎಚ್ಚರಿಕೆ ಕೊಟ್ಟಿದ್ದಾರೆ.

ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ 40 ದಶಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ನಿರ್ಮಿಸಲಾಗಿದ್ದು, ಶನಿವಾರ ಉದ್ಘಾಟನೆ ಸಮಾರಂಭವಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಘಟಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಈ ಘಟಕ ಇರೋದು ಅಮ್ಮಿನಬಾವಿ ಮತ್ತು ಮರೇವಾಡ ಗ್ರಾಮದ ವ್ಯಾಪ್ತಿಯಲ್ಲಿ, ಹೀಗಾಗಿ ಇಲ್ಲಿ ಸ್ಥಳೀಯ ಯುವಕರನ್ನೇ ನೌಕರಿಗೆ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಇಲ್ಲಿಂದ ನೀರು ಹೋಗೋದಕ್ಕೆ ನಾವು ಬಿಡುವುದೇ ಇಲ್ಲ ಎನ್ನುವ ಖಡಕ್ ಮಾತುಗಳನ್ನಾಡಿದರು.

ಈ ಮೊದಲು ಹೇಳಿದಾಗ ಅಧಿಕಾರಿಗಳು ಸರಿ ಸರ್, ಎನ್ನುತ್ತಲೇ ಹೊರಗಿನವರನ್ನು ತೆಗೆದುಕೊಂಡಿದ್ದಾರೆ ಎಂದಿರುವ ಅಮೃತ ದೇಸಾಯಿ, ಹೊರಗಿನವರನ್ನು ತೆಗೆದು ಒಗೆಯಿರಿ. ನಮ್ಮ ಸ್ಥಳೀಯರಿಗೆ ನೌಕರಿ ಕೊಡಿ ಎನ್ನುತ್ತ ಶೆಟ್ಟರ್ ಮತ್ತು ಜೋಶಿಯವರನ್ನ ನೋಡಿದ ಶಾಸಕ, ನೀವು ನಮ್ಮ ಹಿರಿಯ ಮಾರ್ಗದರ್ಶಕರು ಇದ್ದೀರಿ. ನಾವು ನೊಂದು ಈ ಮಾತು ಹೇಳುತ್ತಿದ್ದೇವೆ. ದಯಮಾಡಿ ನಮ್ಮ ಯುವಕರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *