– ಆರ್ಎಸ್ಎಸ್ ಪ್ರಮುಖರನ್ನ ಮೆಚ್ಚಿಸಲು ಮುಂದಾದ್ರಾ ಸೈನಿಕ
ರಾಮನಗರ: ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರ್ಎಸ್ಎಸ್ ಸಮವಸ್ತ್ರದಲ್ಲಿ ಮಿಂಚಿದ್ದಾರೆ. ಈ ಮೂಲಕ ಯೋಗೇಶ್ವರ್ ಅವರು ಆರ್ಎಸ್ಎಸ್ನ ಪ್ರಮುಖರನ್ನು ಮೆಚ್ಚಿಸುವುದಕ್ಕೆ ಮುಂದಾದ್ರಾ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕವಾಗಿ ಕೇಳಿಬಂದಿದೆ.
ಅಂದಹಾಗೇ ಸಿ.ಪಿ.ಯೋಗೇಶ್ವರ್ ಅವರು ತಮ್ಮ ಮಕ್ಕಳಾದ ಸಾಯಿಧ್ಯಾನ್ ಹಾಗೂ ಶ್ರವಣ್ ಜೊತೆ ಪಕ್ಕಾ ಆರ್ಎಸ್ಎಸ್ನ ವ್ಯಕ್ತಿಯಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಮಂತ್ರಿಗಿರಿಗಾಗಿ ಸಿಪಿ ಯೋಗೇಶ್ವರ್ ನಡೆಸಿರುವ ಹೊಸ ಕಸರತ್ತು ಎನ್ನಲಾಗುತ್ತಿದೆ.

ಬಿಜೆಪಿ ಸೇರಿದಾಗಿನಿಂದ ಸಿ.ಪಿ.ಯೋಗೇಶ್ವರ್ ಅವರು ಆರ್ಎಸ್ಎಸ್ ಬೈಟಕ್, ಪಥಸಂಚಲನದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದೇ ಗೈರಾಗಿದ್ದ ಅವರು ಇದೀಗ ಆರ್ಎಸ್ಎಸ್ ಸಮವಸ್ತ್ರ ಹಾಕಿ ಲಾಠಿ ಹಿಡಿದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರ ಪರ ಆರ್ಎಸ್ಎಸ್ ಪ್ರಮುಖ, ಬಿಜೆಪಿಯ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬ್ಯಾಟಿಂಗ್ ನಡೆಸಿದ್ದರು. ಆದ್ರೆ ಮೂಲ ಬಿಜೆಪಿಗರ ಹಾಗೂ ಹೆಚ್.ವಿಶ್ವನಾಥ್ ಅವರ ವಿರೋಧದಿಂದ ಸಚಿವ ಸ್ಥಾನ ಕೈತಪ್ಪುವಂತಾಗಿತ್ತು. ಹೀಗಾಗಿ ಮುಂದೆ ಜೂನ್ ತಿಂಗಳಿನಲ್ಲಿ ಮತ್ತೆ ಸಂಪುಟ ವಿಸ್ತರಣೆ ನಡೆಯಲಿದ್ದು, ಅಂದು ಸಚಿವ ಸಂಪುಟದಲ್ಲಿ ಸೇರಲು ಆರ್ಎಸ್ಎಸ್ ಪ್ರಮುಖರ ಮೆಚ್ಚುಗೆ ಗಳಿಸಲು ಸಿ.ಪಿ.ಯೋಗೇಶ್ವರ್ ಮುಂದಾಗಿದ್ದಾರೆ ಎನ್ನಲಾಗಿದೆ.

ರಾಮನಗರದಲ್ಲಿ ಇದೇ ತಿಂಗಳ 9ರಂದು ಆರ್ಎಸ್ಎಸ್ ಪಥ ಸಂಚಲನ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ದಿಕ್ಸೂಚಿಯಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಲಿದ್ದಾರೆ. ಅಲ್ಲದೇ ಹಲವು ನಾಯಕರು ಹಾಗೂ ಸಿ.ಪಿ. ಯೋಗೇಶ್ವರ್ ಕೂಡ ಭಾಗಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಯೋಗೇಶ್ವರ್ ಅವರು ಆರ್ಎಸ್ಎಸ್ ಸಮವಸ್ತ್ರ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ.

Leave a Reply