ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

ಮೈಸೂರು: ಕನ್ನಡದ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚಿತ್ರರಂಗದಲ್ಲಿರುವ ಎರಡು ಬಣಗಳ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಟೆನ್ನಿಸ್ ಕೃಷ್ಣ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು. ಸಿದ್ದು ಭೇಟಿ ಬಳಿಕ ಮಾತನಾಡಿದ ಅವರ, ಇಷ್ಟು ದಿನ ನಾನು ಸಿನಿಮಾದಲ್ಲಿ ಬ್ಯುಸಿಯಿದ್ದೆ. ಹಾಗಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಈಗ ಪಕ್ಕದ ರೋಡಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಎಷ್ಟೋ ಬಾರಿ ಅವರು ನನಗೆ ಕರೆದುಕೊಂಡು ಬಂದು ಊಟ ಮಾಡಿಸಿದ್ದಾರೆ ಎಂದರು.

ಇದೇ ವೇಳೆ, ಈ ನಡುವೆ ಜನ ಸಿನಿಮಾ ನೋಡುವುದು ಕಡಿಮೆ ಆಗಿದೆ. ಒಳ್ಳೆಯ ಸಿನಿಮಾ ಬರುತ್ತೆ, ಜನರು ಅದನ್ನು ನೋಡಿ ಪ್ರೋತ್ಸಾಹಿಸಬೇಕು. ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿದೆ. ಈ ಮೊದಲು ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹಾಗಾಗಿ ಈಗ ಹಿರಿಯ ನಟರಿಗೆ ಅವಕಾಶ ಸಿಗುತ್ತಿದೆ. ತುಂಬಾ ಜನ ಈ ಬಗ್ಗೆ ಮಾತನಾಡಲು ಹೆದರುಕೊಳ್ಳುತ್ತಿದ್ದರು. ನಾನು ಎಷ್ಟು ದಿನ ಕಾಯಲಿ ಎಂದು ಮಾತನಾಡಿದೆ, ಮಾತನಾಡಿದಕ್ಕೆ ಅವಕಾಶ ಸಿಕ್ತು ಎಂದರು.

ನನಗೆ ಈಗ ಅನ್ನ ಇದೆ. ನಾನು ಈಗಲೂ ಉತ್ತರ ಕರ್ನಾಟಕಕ್ಕೆ ಹೋಗಿ ನಾಟಕದಲ್ಲಿ ಪಾತ್ರ ಮಾಡಿದ್ರೆ, 35 ಅಡಿ ಕಟೌಟ್ ಹಾಕುತ್ತಾರೆ. ನಾಟಕದಲ್ಲಿ ಪಾತ್ರ ಮಾಡಿದರೆ ನನಗೆ ಅನ್ನ ಸಿಗುತ್ತೆ. ಆದರೆ ಅಭಿಮಾನಿಗಳು ನೀವು ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ಈಗ ಆ ಗುಂಪು ಒಡೆದು ಹೋಗಿದೆ. ಹಾಗಾಗಿ ನಮಗೆ ಅವಕಾಶಗಳು ಸಿಗುತ್ತಿದೆ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.

ಅಲ್ಲದೆ ಸಿದ್ದರಾಮಯ್ಯ ಅವರ ಮಾತನ್ನು ಚಿತ್ರರಂಗದ ಹಲವರು ಕೇಳುತ್ತಾರೆ. ಹಾಗಾಗಿ ಸಿದ್ದರಾಮಯ್ಯ ಭೇಟಿಗೆ ಬಂದಿದ್ದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *