ಮಡಿಕೇರಿ: ಭಾರತೀಯ ಸೇನೆಯಲ್ಲಿ 30 ವಷ9ಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸೈನಿಕನನ್ನು ಸನ್ಮಾನಿಸಿ ಗೌರವಿಸಿದ ಭಾವಾನಾತ್ಮಕ ಕ್ಷಣಗಳಿಗೆ ಮಡಿಕೇರಿ ನಗರದಲ್ಲಿ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮ ಸಾಕ್ಷಿಯಾಯಿತು.
ಕೊಡಗಿನ ಖ್ಯಾತ ಇತಿಹಾಸಕಾರ ದಿ.ಡಿ.ಎನ್ ಕೃಷ್ಣಯ್ಯ ಅವರ ಪುತ್ರಿ ಕುಂಬೂರು ಗ್ರಾಮ ನಿವಾಸಿ ಇಂದಿರಾ ಮತ್ತು ಸತ್ಯನಾರಾಯಣ ದಂಪತಿ ಪುತ್ರರಾಗಿರುವ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್ ಭಾರತೀಯ ಸೇನೆಯ ಸಿಗ್ನಲ್ಸ್ ವಿಭಾಗದಲ್ಲಿ ದೇಶದ ವಿವಿಧೆಡೆ 30 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಇತ್ತೀಚಿಗಷ್ಟೇ ರಾಜಾರಾಮ್ ನಿವೃತ್ತರಾಗಿ ಸ್ವಗ್ರಾಮಕ್ಕೆ ಹಿಂದಿರುಗಿದರು.

ಇದೇ ಸಂದರ್ಭ ಮಡಿಕೇರಿಯ ಓಂಕಾರ ಸದನದಲ್ಲಿ ರಾಜಾರಾಮ್ ಸಹೋದರಿಯಾಗಿರುವ ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್‍ನ ತಾರಾ, ಗೋಪಾಲ ಭಟ್ ದಂಪತಿಯ ಪುತ್ರ ನಿಖಿಲ್ ಭಟ್ ಹಾಗೂ ಸೌಮ್ಯಶ್ರೀ ವಿವಾಹ ಆರತಕ್ಷತೆ ಏರ್ಪಡಾಗಿತ್ತು.
ಆರತಕ್ಷತೆ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ರಾಜಾರಾಮ್ ಹಾಗೂ ಸೇನೆಗೆ ಮಗನನ್ನು ಸೇರ್ಪಡೆಗೊಳಿಸಿದ್ದ ಇಂದಿರಾ ಸತ್ಯನಾರಾಯಣ, ಪತ್ನಿ ಜಿ.ಆರ್ ಸವಿತಾ ಅವರನ್ನು ರಾಜ್ಯ ಪೊಲೀಸ್ ಇಲಾಖೆಯ ನಿವೃತ್ತ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಳ್, ಸುಂಟಿಕೊಪ್ಪದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಬಂಧು ಬಳಗದವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್, 3 ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಜೀವನದಲ್ಲಿ ಸಾರ್ಥಕತೆ ಮೂಡಿಸಿದೆ. ಸಾಕಷ್ಟು ಸವಾಲುಗಳನ್ನು ಹಲವಾರು ಹಂತಗಳಲ್ಲಿ ಎದುರಿಸುವ ಭಾರತೀಯ ಯೋಧನಿಗೆ ಸಂಸಾರದ ಸುಖಕ್ಕಿಂತ ದೇಶದ ರಕ್ಷಣೆಯ ಚಿಂತೆಯೇ ಹೆಚ್ಚಾಗಿರುತ್ತದೆ. ಹೀಗಾಗಿ ಸೈನಿಕನು ಕರ್ತವ್ಯ ನಿರ್ವಹಿಸುವ ಸಂದರ್ಭ ಆತನ ಕುಟುಂಬ ವರ್ಗದವರನ್ನು ಕಾಳಜಿಯಿಂದ ಆತನ ಗ್ರಾಮಸ್ಥರು ನೋಡಿಕೊಳ್ಳಬೇಕಾಗಿದೆ. ತನ್ನ ಸ್ವಗ್ರಾಮವಾದ ಕುಂಬೂರು ಗ್ರಾಮಸ್ಥರು ತನ್ನ ಪೋಷಕರನ್ನು ಅವರ ಹಿರಿ ವಯಸ್ಸಿನಲ್ಲಿ ತನ್ನ ಗೈರುಹಾಜರಿಯಲ್ಲಿ ಅತ್ಯುತ್ತಮವಾಗಿ ನೋಡಿಕೊಂಡದ್ದು ತನಗೆ ಹೆಮ್ಮೆ ತಂದಿದೆ ಎಂದರು.
ಒಟ್ಟಿನಲ್ಲಿ ನಿವೃತ್ತನಾಗಿ ಸ್ವಗ್ರಾಮಕ್ಕೆ ಬಂದ ಸೈನಿಕನನ್ನು ವಿವಾಹ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದ್ದು ಬಂಧು-ಬಳಗದವರ ಶ್ಲಾಘನೆಗೆ ಪಾತ್ರವಾಯಿತು.


Leave a Reply