ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಗಮನ ಸೆಳೆದ ಅಜ್ಜಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಕಿಚ್ಚು ಜೋರಾಗಿದ್ದು, ಪ್ರತಿಭಟನೆಯಲ್ಲಿ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯ ಸ್ವರೂಪ ಹೆಚ್ಚಾಗುತ್ತಿದ್ದಂತೆ ಪ್ರತಿಭಟನೆಯಲ್ಲಿದ್ದ ವೃದ್ದೆಯೊಬ್ಬರ ಆಕ್ರೋಶವೂ ಹೆಚ್ಚಾಗಿತ್ತು. ತಮ್ಮ ನೋವು, ಸಂಕಟವನ್ನ ವಿಭಿನ್ನ ಶೈಲಿಯ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ವ್ಯಕ್ತಪಡಿಸಿದರು. ಪೊಲೀಸರೇ ಬರಲಿ, ಯಾರೇ ಬರಲಿ. ನಮಗೆ ನ್ಯಾಯ ಬೇಕು ಅಂತ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ವಿಭಿನ್ನವಾಗಿತ್ತು. ಅಜ್ಜಿಯ ಈ ಆರ್ಥನಾದ ಎಲ್ಲರ ಗಮನ ಸೆಳೆಯಿತು.

ಪ್ರತಿಭಟನೆ ಯಾಕೆ?
ಸಿಲಿಕಾನ್ ಸಿಟಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಮತ್ತೆ ರಾಜಧಾನಿಯಲ್ಲಿ ಪ್ರತಿಭಟನೆಯ ಧ್ವನಿ ಮೊಳಗಿಸಿದ್ದಾರೆ. ಕನಿಷ್ಠ ಕೂಲಿ ಹೆಚ್ಚಳವಾಗಬೇಕು. ನಿವೃತ್ತಿ ವೇತನ ನೀಡಬೇಕು. ಖಾಸಗಿಕರಣ ಕೈಬಿಡಬೇಕು, ಹೀಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯ ಕಿಚ್ಚು ಹೆಚ್ಚಾಗ್ತಿದೆ. ಬಿಸಿಯೂಟ ಕಾರ್ಯಕರ್ತೆಯರ ಆಕ್ರೋಶ ಮುಗಿಲು ಮುಟ್ಟಿದೆ. ಹೊಡಿಲಿ, ಬಡಿಲಿ, ಅರೆಸ್ಟ್ ಮಾಡಿದರೂ ಪರವಾಗಿಲ್ಲ. ನಾವು ಇಲ್ಲಿಂದ ಹೋಗಲ್ಲ ಅಂತ ಬಿಸಿಯೂಟ ಕಾರ್ಯಕರ್ತೆಯರು ಬಿಗಿಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿಯನ್ನ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೆಜಸ್ಟಿಕ್‍ನಿಂದ ಫ್ರೀಡಂಪಾರ್ಕ್‍ಗೆ ರ್‍ಯಾಲಿ ಹೋಗಲು ಪ್ರತಿಭಟನಾಕಾರರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ನಿನ್ನೆಯೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನೆಗೆ ಅನುಮತಿ ನೀಡದೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಬಿಸಿಯೂಟ ಕಾರ್ಯಕರ್ತರನ್ನ ಅಲ್ಲಿಯೇ ತಡೆಯಿರಿ ಅಂತ ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದರು. ಈ ನಡುವೆಯೂ ಪ್ರತಿಭಟನಾಕಾರರು ಫ್ರೀಡಂಪಾರ್ಕ್‍ಗೆ ರ್‍ಯಾಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೇ, ರೈಲ್ವೆ ನಿಲ್ದಾಣದ ಬಳಿಯೇ ತಡೆದರು.

ನಿಷೇಧಾಜ್ಞೆ ನಡುವೆಯೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅಕ್ಷರ ದಾಸೋಹ ನೌಕರರು ವಿವಿಧ ಜಿಲ್ಲೆಗಳಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆನೇ ಬಂದಿಳಿದು, ಪ್ರತಿಭನೆಯಲ್ಲಿ ಭಾಗಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *