ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬಗಳನ್ನಿಟ್ಟು ರಸ್ತೆ ನಿರ್ಮಿಸಿದ ಭೂಪರು

ಬೆಳಗಾವಿ(ಚಿಕ್ಕೋಡಿ): ಸಾಮಾನ್ಯವಾಗಿ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬಗಳನ್ನ ಅವಳಡಿಸದ್ದನ್ನ ನಾವು ನೋಡಿರುತ್ತೇವೆ. ಆದರೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪೂರ ಗ್ರಾಮದಲ್ಲಿ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬಗಳನ್ನ ಬಿಟ್ಟು ನೂತನ ರಸ್ತೆ ನಿರ್ಮಿಸಲಾಗಿದೆ.

ನಸಲಾಪೂರ ಗ್ರಾಮದಲ್ಲಿ ನೆರೆ ಹಾವಳಿ ಯೋಜನೆಯಡಿ ರಾಯಬಾಗ-ಅಂಕಲಿ ಮುಖ್ಯ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿ ಇದಾಗಿದ್ದು, ರಸ್ತೆ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬಗಳು ಈಗ ರಸ್ತೆ ಅಗಲೀಕರಣದಿಂದ ರಸ್ತೆ ಮಧ್ಯ ಬಂದಿವೆ. ನಸಲಾಪೂರ ಗ್ರಾಮದಲ್ಲಿ ರಸ್ತೆ ಅಗಲೀಕರಣದಿಂದ ವಿದ್ಯುತ್ ಕಂಬಗಳು ರಸ್ತೆ ಮಧ್ಯ ಬಂದಿದ್ದು, ಇದರ ಬಗ್ಗೆ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಮಧ್ಯೆ ವಿದ್ಯುತ್ ಕಂಬಗಳು ಇರುವುದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಯುವ ಪರಿಸ್ಥಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಸಮೀಪದಲ್ಲಿ ಸಕ್ಕರೆ ಕಾರ್ಖಾನೆ ಇರುವುದರಿಂದ ನಿತ್ಯ ಈ ಮಾರ್ಗದಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್ ಗಳು ಓಡಾಡುತ್ತವೆ. ಅವು ಆಕಸ್ಮಿಕವಾಗಿ ವಿದ್ಯುತ್ ಕಂಬಕ್ಕೆ ತಾಗಿದರೆ ಭಾರಿ ಅನಾಹುತ ನಡೆಯುವ ಸಾಧ್ಯತೆಯಿದೆ.

ಈಗಾಗಲೇ ಒಂದು ಬದಿಯಲ್ಲಿ ವಿದ್ಯುತ್ ಕಂಬಗಳನ್ನು ರಸ್ತೆ ನಡುವೆ ಬಿಟ್ಟು ಡಾಂಬರೀಕರಣ ಪೂರ್ಣಗೊಳಿಸಲಾಗಿದ್ದು, ಇನ್ನೊಂದು ಬದಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿದೆ. ಇತ್ತ ಗುತ್ತಿಗೆದಾರ ಬೇಗ ಬೇಗನೆ ರಸ್ತೆ ಕಾಮಗಾರಿ ಮಾಡಿ, ಬಿಲ್ ತೆಗೆದುಕೊಳ್ಳಲು ತರಾತುರಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರೆ ಜೊತೆಗೆ ರಸ್ತೆ ಕಾಮಗಾರಿ ಕೂಡ ಕಳಪೆ ಮಟ್ಟದ್ದಾಗಿರುವುದಾಗಿ ಗ್ರಾಮಸ್ಥರು ದೂರುತ್ತಿದ್ದಾರೆ.

ನೆರೆ ಹಾವಳಿ ಯೋಜನೆಯಡಿ ಅತಿವೃಷ್ಠಿಗೆ ತುತ್ತಾದ ಗ್ರಾಮಗಳ ರಸ್ತೆ ಸುಧಾರಣೆಗೆ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಮಂಜೂರು ಮಾಡಿದೆ. ಆದರೆ ಸರ್ಕಾರದ ಹಣ ಸದುಪಯೋಗವಾಗುವುದಕ್ಕಿಂತ ಹೆಚ್ಚಾಗಿ ದುರಪಯೋಗವಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ರಾಯಬಾಗ ತಾಲೂಕಿನ ಲೋಕೋಪಯೋಗಿ ಅಧಿಕಾರಿಗಳ ಕಾರ್ಯವೈಖರಿಗೆ ಜನ ಛೀಮಾರಿ ಹಾಕುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹೀಗೆ ನಿರ್ಲಕ್ಷ್ಯ ಮೆರೆಯುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಸರ್ಕಾರದ ಹಣ ಪೋಲಾಗದಂತೆ ಗಮನ ವಹಿಸಲಿ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Comments

Leave a Reply

Your email address will not be published. Required fields are marked *