ಹಾರ್ಸ್ ರೈಡರ್ ಜೊತೆ ಪುತ್ರಿ ಎಂಗೇಜ್- ಬಿಲ್ ಗೇಟ್ಸ್ ಅಚ್ಚರಿಯ ಪ್ರತಿಕ್ರಿಯೆ

ವಾಷಿಂಗ್ಟನ್: ವಿಶ್ವದ ಆಗರ್ಭ ಶ್ರೀಮಂತ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಪುತ್ರಿ ಜೆನ್ನಿಫರ್ ಗೇಟ್ಸ್ ತನ್ನ ಗೆಳೆಯ, ಕುದುರೆ ಸವಾರ ಜೊತೆ ಎಂಗೇಜ್ ಆಗಿದ್ದಾರೆ.

ಜೆನ್ನಿಫರ್ ಗೇಟ್ಸ್ ಗುರುವಾರ ತಮ್ಮ ಇನ್‍ಸ್ಟಾದಲ್ಲಿ ತನ್ನ ಗೆಳೆಯ, ಹಾರ್ಸ್ ರೈಡಿಂಗ್ ಕ್ರೀಡಾಪಟು ನಯೆಲ್ ನಾಸರ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಸ್ವತಃ ಬಿಲ್ ಗೇಟ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ಪೋಸ್ಟ್ ನಲ್ಲಿ ಜೆನ್ನಿಫರ್, “ನಯೆಲ್ ನಾಸರ್, ನಿಮ್ಮಂತವರು ಈ ಪ್ರಪಂಚದಲ್ಲಿ ನೀವು ಒಬ್ಬರೇ ಎಂದು ಅನಿಸುತ್ತೆ. ನೀವು ನನಗೆ ಇಂತಹ ಜಾಗದಲ್ಲಿ ಪ್ರಪೋಸ್ ಮಾಡಿದ್ದು, ನನಗೆ ತುಂಬಾ ಖುಷಿಯಾಯಿತು. ನಾನು ನನ್ನ ಪೂರ್ತಿ ಜೀವನವನ್ನು ಕಲಿಯುತ್ತಾ, ನಗುತ್ತಾ, ಪರಸ್ಪರ ಪ್ರೀತಿಸುತ್ತಾ ಕಳೆಯಲು ಬಯಸುತ್ತೇನೆ. ನಾನು ಕೋಟಿ ಬಾರಿ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ನಯೆಲ್ ಕೂಡ ಜೆನ್ನಿಫರ್ ಜೊತೆಗಿರುವ ಫೋಟೋ ಹಾಕಿ ಅದಕ್ಕೆ, “ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಳು. ಈ ಕ್ಷಣ ನಾನು ಪ್ರಪಂಚದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ಅನಿಸುತ್ತಿದೆ. ನನ್ನ ಜೀವನದ ಈ ಸುಂದರವಾದ ಪ್ರಯಾಣವನ್ನು ಶುರು ಮಾಡಲು ಕಾಯಲು ಆಗುತ್ತಿಲ್ಲ. ನನ್ನ ಕಲ್ಪನೆಯಲ್ಲೂ ನಿನ್ನ ಬಿಟ್ಟು ಇರಲು ನನಗೆ ಸಾಧ್ಯವಿಲ್ಲ. ನನ್ನ ಈ ಜೀವನ ಯಾವಗಲೂ ನಿನ್ನದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಜೆನ್ನಿಫರ್ ಅವರ ಈ ಪೋಸ್ಟ್ ಗೆ ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ. ನಿಮ್ಮಬ್ಬರಿಗೂ ಶುಭಾಶಯಗಳು ಎಂದು ಕಮೆಂಟ್ ಮಾಡುವ ಮೂಲಕ ಬಿಲ್ ಗೇಟ್ಸ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಬಿಲ್ ಗೇಟ್ಸ್ ಅವರ ಪತ್ನಿ ಮೆಲಿಂದಾ ಗೇಟ್ಸ್ ಅವರು ಕೂಡ ಕಮೆಂಟ್ ಮಾಡುವ ಮೂಲಕ ಜೋಡಿಗೆ ಶುಭ ಕೋರಿದ್ದಾರೆ. ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುವಾಗ ಜೆನ್ನಿಫರ್ ಹಾಗೂ ನಾಸರ್ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಇವರ ಪ್ರೀತಿ ನಾಲ್ಕು ವರ್ಷ ಮುಂದುವರಿದಿದೆ.

ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೆನ್ನಿಫರ್ ಬಯೋಲಜಿಯಲ್ಲಿ ಪದವಿ ಪಡೆದಿದ್ದಾರೆ. ಇನ್ನು ನಯೆಲ್ ವಜ್ರದ ಉಂಗುರ ನೀಡಿ ಪ್ರಪೋಸ್ ಮಾಡಿದ್ದು, ತಕ್ಷಣ ಜೆನ್ನಿಫರ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ನಯೆಲ್ ಈಜಿಪ್ಟ್‍ನಲ್ಲಿ ಹುಟ್ಟಿ ಕುವೈಟ್‍ನಲ್ಲಿ ಬೆಳೆದಿದ್ದಾರೆ. ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಯೆಲ್ ಎಕನಾಮಿಕ್ಸ್‍ನಲ್ಲಿ ಮ್ಯಾನೇಜ್‍ಮೆಂಟ್ ಪದವಿ ಪಡೆದಿದ್ದಾರೆ. ನಯೆಲ್ 2020ರ ಜಪಾನ್ ನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ದೇಶದ ಪರವಾಗಿ ಹಾರ್ಸ್ ರೈಡಿಂಗ್ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.

Comments

Leave a Reply

Your email address will not be published. Required fields are marked *