ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್ ಮಾಡ್ತಿದ್ದ ಬಾಂಬರ್ ಆದಿತ್ಯ

– ಜಿಮ್ ಪರಿಕರಗಳು, ಬಾರ್‌ನ ಡಿವಿಆರ್ ಪೊಲೀಸ್ ವಶಕ್ಕೆ

ಉಡುಪಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದ ಬಾಂಬರ್, ಸೈಕೋ ಕ್ರಿಮಿನಲ್ ಆದಿತ್ಯ ಓರ್ವ ಜಿಮ್ಮರ್ ಆಗಿದ್ದನು. ಏರ್‌ಪೋರ್ಟ್‌ನಲ್ಲಿ ಬಾಂಬ್ ಇಡುವ ಹಿಂದಿನ ಎರಡು ದಿನ ಉಡುಪಿಯ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದ ಈತ ಅಲ್ಲಿ ದುಬಾರಿ ಜಿಮ್ ಪರಿಕರಗಳನ್ನುಗಳನ್ನು ಬಿಟ್ಟು ಹೋಗಿದ್ದನು. ಅದನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುಶ್ ಅಪ್ ಮಷೀನ್ ಮತ್ತು ಡಂಬಲ್ಸ್ ಅನ್ನು ಕಾರ್ಕಳ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ಅಶೋಕ್ ಶೆಟ್ಟಿ ಕಾರ್ಕಳ ಪೊಲೀಸರಿಗೆ ಡಂಬಲ್ಸ್ ಹಸ್ತಾಂತರ ಮಾಡಿದ್ದಾರೆ. ಈ ನಡುವೆ ಆದಿತ್ಯ ರಾವ್‍ನ ಎರಡು ದಿನದ ಚಲನವಲನಗಳಿರುವ ದೃಶ್ಯಾವಳಿಗಳು ಹೋಟೆಲ್‍ನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದಿತ್ಯ ರಾವ್ ಪ್ರಕರಣದ ತನಿಖೆಯಲ್ಲಿ ಈ ವಿಡಿಯೋ ಮಹತ್ವವಾಗಿದ್ದು, ಸಿಸಿಟಿವಿಯ ಡಿವಿಆರ್‌ನ್ನು ಮಂಗಳೂರು ಎಸಿಪಿ ಬೆಳ್ಳಿಯಪ್ಪ ವಶಪಡಿಸಿಕೊಂಡಿದ್ದಾರೆ.

ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್:
ಆದಿತ್ಯ ಬಂಧನಕ್ಕೊಳಗಾದರೂ ಆತನ ಅವತಾರಗಳು, ಕಥೆಗಳು ಒಂದೊಂದೇ ಹೊರ ಬರುತ್ತಿವೆ. ಅವನೊಬ್ಬ ಕಿಕ್ ಬಾಕ್ಸರ್, ಕರಾಟೆ ಪಟು ಆಗಿದ್ದು, ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದನು. ಬಾಂಬ್ ಇಡುವ ಕ್ರಿಮಿನಲ್ ಆದರೂ ತನ್ನ ಆರೋಗ್ಯ ಚೆನ್ನಾಗಿಯೇ ಕಾಪಾಡಿಕೊಂಡಿದ್ದನು.

ಬ್ಯಾಗಿನೊಳಗೆ ಸದಾಕಾಲ ತನ್ನ ಜೊತೆಗೆ ಡಂಬಲ್ಸ್ ಕೊಂಡೊಯ್ಯುತ್ತಿದ್ದ ಆದಿತ್ಯ, ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಹಿಂದಿನ ದಿನವೂ ದೈಹಿಕ ವ್ಯಾಯಾಮ ಮಾಡಿರುವುದು ಬೆಳಕಿಗೆ ಬಂದಿದೆ. ಬಾಂಬ್ ಹೊತ್ತ ಬ್ಯಾಗ್‍ನ ಜೊತೆಗೆ ಆದಿತ್ಯ ಡಂಬಲ್ಸ್ ಕೂಡಾ ಹೊತ್ತು ತಂದಿದ್ದನು. ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲಿನಲ್ಲಿ ಎರಡು ದಿನದ ಹಿಂದೆ ಅಂದರೆ ಜನವರಿ 18 ಈತ ಕೆಲಸಕ್ಕೆ ಸೇರಿದ್ದನು. ಕೆಲಸ ಮುಗಿದ ಬಳಿಕ ರಾತ್ರಿ ಅಲ್ಲೇ ತಂಗುತ್ತಿದ್ದ ಆದಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ಡಂಬಲ್ಸ್ ನಲ್ಲಿ ದೈಹಿಕ ಕಸರತ್ತು ನಡೆಸ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

ಬಾಂಬ್ ಇಡಲು ಸೋಮವಾರ ಹೋಟೆಲ್ ಬಿಟ್ಟು ತೆರಳುವಾಗ ನೀಲಿ ಬಣ್ಣದ ಡಂಬಲ್ಸ್ ಗಳನ್ನು ಹೋಟೆಲ್‍ನಲ್ಲೇ ಬಿಟ್ಟು ಹೋಗಿದ್ದು, ಆ ಡಂಬಲ್ಸ್ ಮತ್ತು ಪುಶಪ್ ಸಾಧನ ಹೋಟೆಲ್ ಸಿಬ್ಬಂದಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಅದನ್ನು ಜೋಪಾನ ಮಾಡಿ ಇಡಲಾಗಿತ್ತು. ಈಗ ಆ ಎರಡೂ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *