ಮೊದ್ಲು ಲಾಂಗು, ಮಚ್ಚು ಹಿಡಿದು ಟಿಕ್‍ಟಾಕ್ – ಆಮೇಲೆ ಸ್ಕೆಚ್ ಹಾಕಿ ಅಟ್ಯಾಕ್

ಚಿಕ್ಕಬಳ್ಳಾಪುರ: ಟಿಕ್‍ಟಾಕ್‍ನಲ್ಲಿ ಲಾಂಗು, ಮಚ್ಚು ಹಿಡಿದು ಟಗರು ಸಿನಿಮಾದ ಹಾಡಿಗೆ ರಿಹರ್ಸಲ್ ಮಾಡಿ, ಮರ್ಡರ್ ಮಾಡೇ ಮಾಡ್ತೀನಿ ಎಂದು ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ಬಳಿ ಆರೋಪಿಗಳು ಕೃತ್ಯವೆಸೆಗಿದ್ದರು. ಹೊಸಕೋಟೆ ತಾಲೂಕಿನ ತರಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ತ್ಯಾಗರಾಜು ಮೇಲೆ ಮೂವರು ಯುವಕರು ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ತ್ಯಾಗರಾಜು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಆರೋಪಿಗಳಾದ ಗಂಭೀರನಹಳ್ಳಿ ಗ್ರಾಮದ ಸೋಮು ಅಲಿಯಾಸ್ ಸೋಮಶೇಖರ್, ಪಾಂಡು ಅಲಿಯಾಸ್ ಮಂಜು ಹಾಗೂ ನಂದನ್ ಅಲಿಯಾಸ್ ನಂದಕುಮಾರ್ ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೂ ಮುನ್ನ ಪಾಂಡು ಹಾಗೂ ನಂದಕುಮಾರ್ ಪ್ರಕರಣದಲ್ಲಿ ಭಾಗಿಯಾಗದ ತನ್ನ ಮತ್ತೋರ್ವ ಸ್ನೇಹಿತ ಮಂಜುನಾಥ್ ಜೊತೆ ಮಾಡಿರುವ ಟಿಕ್‍ಟಾಕ್ ರಿಹರ್ಸಲ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹಳೆ ವೈಷಮ್ಯದ ಹಿನ್ನಲೆ ಕೊಲೆಗೆ ಪ್ಲಾನ್:
ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ತ್ಯಾಗರಾಜು ಹಾಗೂ ಆರೋಪಿ ಸೋಮು ನಡುವೆ ಜಗಳ ನಡೆದಿತ್ತು. ಈ ವೇಳೆ ಸೋಮು ಮನೆಗೆ ನುಗ್ಗಿದ್ದ ತ್ಯಾಗರಾಜು ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಹಳೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎನ್ನುವುದು ತಿಳಿದುಬಂದಿದೆ.

ಹಳೆ ಪ್ರಕರಣದ ದ್ವೇಷ ಇಟ್ಟುಕೊಂಡಿದ್ದ ಸೋಮು ಸ್ನೇಹಿತರೊಂದಿಗೆ ಸೇರಿ ಈ ಕೃತ್ಯವೆಸೆಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಸೋಮು ಜೊತೆ ಗುರುತಿಸಿಕೊಂಡಿದ್ದ ಪಾಂಡು ಹೆಸರನ್ನ ಗಾಯಗೊಂಡಿದ್ದ ತ್ಯಾಗರಾಜು ಪೊಲೀಸರು ವಿಚಾರಣೆ ನಡೆಸಿದ ವೇಳೆ ಹೇಳಿದ್ದರು. ಈ ಆಧಾರದ ಮೇಲೆ ಮೂವರನ್ನ ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *