ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಶೈಲೂ’ ನಟಿ

ತಿರುವನಂತಪುರಂ: ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಶೈಲೂ’ ಚಿತ್ರದಲ್ಲಿ ನಟಿಸಿದ ನಟಿ ಭಾಮಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊಟ್ಟಾಯಂನಲ್ಲಿ ಭಾಮಾ ಅವರು ಉದ್ಯಮಿ ಅವರ ಜೊತೆ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯಲ್ಲಿ ಕೇವಲ ಅವರ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ಮದುವೆಯಲ್ಲಿ ಭಾಮಾ ಕೆಂಪು ಬಣ್ಣದ ಕಾಂಚಿಪುರಂ ಸೀರೆ ಹಾಗೂ ಆ್ಯನ್‍ಟಿಕ್ ಟೆಂಪಲ್ ಜಿವೆಲ್ಲರಿ ಧರಿಸಿ ಮಿಂಚಿದ್ದಾರೆ. ಇತ್ತ ಅರುಣ್ ಕುರ್ತಾ ಹಾಗೂ ದೋತಿ ಧರಿಸಿದ್ದರು.

ಇತ್ತೀಚಿಗಷ್ಟೇ ಭಾಮಾ ಉದ್ಯಮಿ ಅರುಣ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ನಿಶ್ಚಿತಾರ್ಥದಲ್ಲಿ ಕೇವಲ ಅವರ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಭಾಮಾ ಅವರದ್ದು ಆರಂಜ್ಡ್ ಮ್ಯಾರೇಜ್ ಆಗಿದ್ದು, ಅರುಣ್ ಹಾಗೂ ಅವರು ಸಹಪಾಠಿಗಳು ಎಂದು ಹೇಳಲಾಗುತ್ತಿದೆ. ಅರುಣ್ ಮೂಲತಃ ಕೇರಳದ ಚೆನ್ನಿಥಾಲ, ಆಲಪ್ಪುಳದವರಾಗಿದ್ದು, ಕೆನೆಡಾದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.

‘ನಿವೇದಂ’ ಚಿತ್ರದ ಮೂಲಕ ಭಾಮಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಅವರು ‘ಸೈಕಲ್’, ‘ಐವರ್ ವಿವಾಹಿತರಾಯಲ್’, ‘ಜನಪ್ರಿಯನ್’, ‘ಸೆವೆನ್ಸ್’ ಹಾಗೂ ‘ಹಸ್ಬೆಂಡ್ಸ್ ಇನ್ ಗೋವಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮೊದಲಸಲಾ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಭಾಮಾ ಶೈಲೂ, ಅಂಬರ, ಅರ್ಜುನಾ, ಆಟೋರಾಜ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *