ಸೈದ್ಧಾತಿಕ ವಿರೋಧಿಯಾದ್ರೂ ಮೈತ್ರಿ – ಮುನ್ಸಿಪಲ್ ಚುನಾವಣೆಯಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್, ಬಿಜೆಪಿ

ಹೈದರಾಬಾದ್: ರಾಜಕೀಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬದ್ಧ ವೈರಿಗಳು. ಎರಡು ಪಕ್ಷಗಳ ನಿಲುವು ಬೇರೆ ಬೇರೆಯಾಗಿದ್ದರೂ ತೆಲಂಗಾಣದ ಮುನ್ಸಿಪಲ್ ಚುನಾವಣೆಯಲ್ಲಿ ಪರಸ್ಪರ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿವೆ.

ಮಣಿಕೊಂಡ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗಿದ್ದು ಅಧಿಕಾರಕ್ಕೆ ಬಂದಿದೆ. ಇತ್ತೀಚೆಗೆ ನಡೆದ ಒಟ್ಟು 20 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8, ಬಿಜೆಪಿ 6 ಮತ್ತು ಟಿಆರ್‌ಎಸ್‌(ತೆಲಂಗಾಣ ರಾಷ್ಟ್ರ ಸಮಿತಿ) 5 ಸ್ಥಾನ ಗೆದ್ದಿದ್ದವು. 1 ಸ್ಥಾನ ಪಕ್ಷೇತರರ ಪಾಲಾಗಿತ್ತು.

ಫಲಿತಾಂಶದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ, ರಾಜ್ಯದಲ್ಲಿನ ಅಡಳಿತದಲ್ಲಿ ಇರುವ ಟಿಆರ್‌ಎಸ್‌ಗೆ ಎರಡು ಸ್ಥಾನ ತಪ್ಪಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಮಾತುಕತೆಯ ಪ್ರಕಾರ ಕಾಂಗ್ರೆಸ್ಸಿಗೆ ಅಧ್ಯಕ್ಷ ಸ್ಥಾನ ಸಿಕ್ಕರೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.

ಮಕ್ಥಲ್ ಚುನಾವಣೆಯಲ್ಲೂ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿದ್ದವು, ಆದರೆ ಇದು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೆ ಟಿಆರ್‌ಎಸ್‌ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ನಾಯಕ ಜಿತೇಂದ್ರ ರೆಡ್ಡಿ ಈ ಮೈತ್ರಿ ಸಂಬಂಧ ಪ್ರತಿಕ್ರಿಸಿದ್ದು ‘ಮಕ್ಥಲ್ ನನ್ನ ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮಾಡುವ ಯಾವುದೇ ಮಾತುಕತೆ ನಡೆದಿರಲಿಲ್ಲ. ಅಷ್ಟೇ ಅಲ್ಲದೆ ಬಿಜೆಪಿ ಬಳಿ ಬಹುಮತವಿತ್ತು. ಬೇರೆ ಕ್ಷೇತ್ರಗಳಲ್ಲಿ ಏನೇ ಆಗಿದ್ದರೂ ಅದೊಂದು ಸ್ಥಳೀಯ ಹಾಗೂ ಆಂತರಿಕ ವಿಚರವಾಗಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ಬಿಜೆಪಿ ಹೂಡಿರುವ ತಂತ್ರ ಎಂದು ತಿಳಿಸಿದ್ದಾರೆ.

2018ರಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 119 ಸ್ಥಾನಗಳ ಪೈಕಿ ಟಿಆರ್‌ಎಸ್‌ 88, ಕಾಂಗ್ರೆಸ್ 19, ಎಐಎಂಎಂ 7, ಟಿಡಿಪಿ 2, ಬಿಜೆಪಿ 1 ಸ್ಥಾನವನ್ನು ಗೆದ್ದುಕೊಂಡಿತ್ತು.

Comments

Leave a Reply

Your email address will not be published. Required fields are marked *