ದೇಶಾದ್ಯಂತ ದುಷ್ಕೃತ್ಯಕ್ಕೆ ಪಿಎಫ್‍ಐಗೆ ಕುಮ್ಮಕ್ಕು – 73 ಖಾತೆಗಳಿಗೆ ಹರಿದಿದೆ 120 ಕೋಟಿ ಹಣ

ನವದೆಹಲಿ : ದೇಶಾದ್ಯಂತ ಗಲಭೆ ಸೃಷ್ಟಿಸಲು ಪಿಎಫ್‍ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)ಗೆ ಕೋಟಿಗಟ್ಟಲೇ ಹವಾಲಾ ಹಣ ಹರಿದು ಬಂದಿದೆ ಎಂದು ವರದಿಯಾಗಿದೆ.

ದೇಶದಲ್ಲಿ ಗಲಭೆ ಸೃಷ್ಟಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂದ್ರೆ ಪಿಎಫ್‍ಐ, ಎಸ್‍ಡಿಪಿಐನಂಥ ಸಮಾಜಘಾತುಕ ಶಕ್ತಿಗಳ ಕೈವಾಡ ಇದೆ. ಇದಕ್ಕೆ ವಿದೇಶಿ ಹಣದ ಕುಮ್ಮಕ್ಕಿದೆ. ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಬಿಜೆಪಿ-ಹಿಂದೂಪರ ಸಂಘಟನೆಗಳು ಒತ್ತಾಯಿಸ್ತಿದ್ದವು. ಜೊತೆಗೆ ಪೌರತ್ವ ವಿರೋಧಿ ಹೆಸರಲ್ಲಿ ಕರ್ನಾಟಕ, ಉತ್ತರ ಪ್ರದೇಶದಲ್ಲಿ ಹಿಂಸಾಚಾರ ಸೃಷ್ಟಿಗೆ ಪಿಎಫ್‍ಐಗೆ ವಿದೇಶದಿಂದ ಹವಾಲ ಹಣ ಹರಿದು ಬಂದಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಆರೋಪಕ್ಕೆ ಈಗ ಪುಷ್ಠಿ ಸಿಗುತ್ತಿದೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಾರಿ ನಿರ್ದೇಶನಾಲಯ, ಪಿಎಫ್‍ಐನ ಹಣದ ಮೂಲ ಕೆದಕಿದಾಗ ಹವಾಲ ಹಣ ಹರಿದಿರೋದು ಬೆಳಕಿಗೆ ಬಂದಿದೆ. ಈ ಹಣ ಹಂಚಿಕೆಯಾಗಿರೋದರಲ್ಲಿ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಕಪಿಲ್ ಸಿಬಲ್ ಹೆಸರಿದೆ.

ಪಿಎಫ್‍ಐಗೆ ಫಂಡ್:
ಪಿಎಫ್‍ಐ ಸಂಘಟನೆಯ 73 ಖಾತೆಗಳಿಗೆ ಬರೋಬ್ಬರಿ 120.5 ಕೋಟಿ ಹವಾಲಾ ಹಣವನ್ನು ನಗದು/ಆರ್ ಟಿಜಿಎಸ್/ಎನ್‍ಇಎಫ್‍ಟಿ/ಐಎಂಪಿಎಸ್ ಮೂಲಕ ಜಮೆ ಮಾಡಲಾಗಿದೆ. ಪ್ರತಿಭಟನೆ ನಡೆದ ಎರಡ್ಮೂರು ದಿನಗಳಲ್ಲಿಯೇ ಈ ಖಾತೆಗಳಿಂದ ಹಣದ ವಹಿವಾಟು ನಡೆದಿದೆ. ಇದೇ ಖಾತೆಗಳಿಂದ ಚೆಕ್ ಮೂಲಕ ಸಹ ವ್ಯವಹಾರ ಮಾಡಲಾಗಿದೆ ಎಂದು ಇಡಿ ತನ್ನ ವರದಿಯಲ್ಲಿ ತಿಳಿಸಿದೆ.

ದೆಹಲಿಯ ನೆಹರೂ ವ್ಯಾಪ್ತಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನಲ್ಲಿರುವ ಪಿಎಫ್‍ಐ ಖಾತೆಗೆ ಜಮೆಯಾದ ಹಣದ ಮೂಲ ಪತ್ತೆಗೆ ಮುಂದಾದಾಗ ಉತ್ತರ ಪ್ರದೇಶದ ಭಹ್‍ರೈಚ್, ಬಿಜ್ನೋರ್, ಶಾಮಿಲಿ, ದಸ್ನಾ ಜಿಲ್ಲೆಗಳಲ್ಲಿರುವ ಅಕೌಂಟ್ ಗಳ ಮಾಹಿತಿ ಲಭ್ಯವಾಗಿದೆ. ಈ ಎಲ್ಲ ಖಾತೆಗಳಲ್ಲಿ ನಗದು ರೂಪದಲ್ಲಿ 41.5 ಕೋಟಿ ರೂ.ಜಮೆ ಆಗಿದ್ದರೆ, 27 ಖಾತೆಗಳಲ್ಲಿಯೇ 59 ಕೋಟಿ ರೂ. ಜಮಾವಣೆ ಆಗಿರೋದು ತನಿಖೆಯಲ್ಲಿ ಬಯಲಾಗಿದೆ.

ಕೊಯಿಕ್ಕೊಡ್ ನಲ್ಲರುವ ಮಾವೂರ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ನಲ್ಲಿರುವ 44051010004277 ನಂಬರಿನ ಖಾತೆಗೆ ಅನಾಮಧೇಯರ ಹೆಸರಲ್ಲಿ ಹಣ ಜಮೆ ಆಗಿದೆ. ಪಿಎಫ್‍ಐ ತನ್ನ ಖಾತೆಯಿಂದ ತಮಿಳುನಾಡಿನ ಜೊಟೀ ಗ್ರೂಫ್ ಕಂಪನಿಗೆ 1 ಕೋಟಿ 17 ಲಕ್ಷ ರೂ. ವರ್ಗಾಯಿಸಿದೆ. ಜೊಟೀ ಗ್ರೂಫ್ ಪ್ಲಾಸ್ಟಿಕ್ ಮತ್ತು ಬ್ಯಾಗ್ ತಯಾರಿಕೆ ಮಾಡುತ್ತಿದ್ದು, ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದೆ. ಹಾಗಾಗಿ ಪಿಎಫ್‍ಐ ಮತ್ತು ಜೊಟೀ ನಡುವೆ ವ್ಯವಹಾರಗಳು ನಡೆದಿವೆ.

ಇದೇ ಖಾತೆಗಳಿಂದ ಕಪಿಲ್ ಸಿಬಲ್ ಖಾತೆಗೆ 77 ಲಕ್ಷ ರೂ., ಇಂದಿರಾ ಜೈಸಿಂಗ್, 4 ಲಕ್ಷ, ದುಷ್ಯಂತ್ ದವೆ, 11 ಲಕ್ಷ, ಉಗ್ರ ಕೃತ್ಯದ ಆರೋಪಿ ಅಬ್ದುಲ್ ಸಮದ್ ಖಾತೆಗೆ 3.10 ಕೋಟಿ ಜಮೆ ಮತ್ತು ಪಿಎಫ್‍ಐ ಕಾಶ್ಮೀರದ ಖಾತೆಗೆ 1.68 ಕೋಟಿ ರೂಪಾಯಿ ಜಮೆ ಆಗಿರೋದು ತನಿಖೆಯಲ್ಲಿ ತಿಳಿದು ಬಂದಿದೆ.

ಪಿಎಫ್‍ಐ ಸ್ಪಷ್ಟನೆ: ಜಾರಿ ನಿರ್ದೇಶನಾಲಯ ನಮ್ಮ ಸಂಸ್ಥೆಯನ್ನು ಸಂಪರ್ಕಿಸಿಲ್ಲ. ನಮ್ಮ ವಿರುದ್ಧದ ಆರೋಪಗಳು ಆಧಾರ ರಹಿತ. ನಾವು ಕಾನೂನಿಗೆ ಬದ್ಧರಾಗಿದ್ದೇವೆ ಅಂತ ಪಿಎಫ್‍ಐ ಹೇಳಿಕೆ ಬಿಡುಗಡೆ ಮಾಡಿ ಹಣದ ಮೂಲದ ಬಗ್ಗೆ ಮೌನ ವಹಿಸಿದೆ.

ವಕೀಲರ ಪ್ರತಿಕ್ರಿಯೆ: ಈ ಕುರಿತು ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದು, ನನ್ನ ಹೆಸರಿಗೆ ಕಳಂಕ ತರಲು ಮಾಡಿರುವ ಪಿತೂರಿ ಇದು. ಕೇರಳದ ಹಾದಿಯಾ ಕೇಸಲ್ಲಿ ಪಿಎಫ್‍ಐ ಪರವಾಗಿ ವಕಾಲತು ವಹಿಸಿದ್ದೆ. ಅದರ ಪೇಮೆಂಟ್ ಅಷ್ಟೇ. ಇದೆಲ್ಲವೂ ಮಾರ್ಚ್ 2018ಕ್ಕೆ ಮುಂದಿನದ್ದು ಅಂದಿದ್ದಾರೆ. ಮತ್ತೋರ್ವ ವಕೀಲೆ ಇಂದಿರಾ ಜೈಸಿಂಗ್ ಕೂಡ ತಮ್ಮ ಮೇಲಿನ ಆರೋಪ ಅಲ್ಲಗಳೆದಿದ್ದಾರೆ.

Comments

Leave a Reply

Your email address will not be published. Required fields are marked *