ಶಿಕ್ಷಕರ ಸಿಇಟಿ ಪರೀಕ್ಷಾ ಗೊಂದಲ ನಿವಾರಿಸಲಾಗುವುದು: ಸುರೇಶ್ ಕುಮಾರ್

ತುಮಕೂರು: ಶಿಕ್ಷಕರ ನೇಮಕಾತಿ ವಿಚಾರವಾಗಿ ನಡೆಸುವ ಸಿಇಟಿ ಪರೀಕ್ಷೆಯಲ್ಲಿನ ತೊಡಕುಗಳನ್ನು ನಿವಾರಿಸಲು ಚರ್ಚೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ತುಮಕೂರಿನ ರಾಮಕೃಷ್ಣ ಆಶ್ರಮದಲ್ಲಿ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿಇಟಿ ಪರೀಕ್ಷೆಯಲ್ಲಿ ಅರ್ಹತಾ ಮಟ್ಟ ಹೆಚ್ಚಿಸಲು ಸಿ ಆ್ಯಂಡ್ ಆರ್ ನಿಯಮವನ್ನು ಇಡಲಾಗಿದೆ. ಈ ಸಿ ಆ್ಯಂಡ್ ಆರ್ ರೂಲ್ಸ್ ನಲ್ಲಿನ ತೊಡಕನ್ನ ನಿವಾರಿಸಲು ಚರ್ಚಿಸಿದ್ದು, ಶೀಘ್ರವೇ ನಿವಾರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಿ ಆ್ಯಂಡ್ ಆರ್ ರೂಲ್ಸ್‍ನಿಂದ ಶಿಕ್ಷಕರ ಆಯ್ಕೆ ಕಠಿಣವಾಗುತ್ತಿದೆ. ಹಾಗಾಗಿ ಈ ನಿಯಮವನ್ನು ನಡೆಸಬೇಕೋ ಅಥವಾ ಬೇಡವೋ ಎಂಬ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್.ಟಿ.ಇ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಹಿಂದಿನ ಸರ್ಕಾರದ ಅವಧಿಯಲ್ಲಿ ಹೊರಡಿಸಿರುವ ಆದೇಶವನ್ನೇ ಮುಂದುವರಿಸುವುದಾಗಿ ಖಡಕ್ಕಾಗಿ ನುಡಿದ ಅವರು, ಬದಲಾವಣೆ ಬಗ್ಗೆ ಸಿ.ಎಂ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ಸದೃಢವನ್ನಾಗಿ ಮಾಡಬೇಕೆಂಬುದು ನನ್ನ ಆಶಯ ಎಂದ ಸಚಿವರು, ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ ಪ್ಲಾಂಟ್‍ಗಳನ್ನು ಕೊಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಚು ನೀರು ಕುಡಿಸುವ ಅಭ್ಯಾಸ ಕೂಡ ಆಗಬೇಕಿದೆ. ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ಧತಿಯನ್ನು ಕೂಡ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮದ ತರಗತಿಗಳು ಚೆನ್ನಾಗಿ ನಡೆಯುತ್ತಿವೆ ಎಂಬ ಅಂಶ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಹೆಚ್ಚು ಪಬ್ಲಿಕ್ ಶಾಲೆಗಳು ಬೇಕೆಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *