ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು: ಬಿ.ಎಲ್.ಸಂತೋಷ್

– ನಮ್ಮ ದೇಶ ಹಿಂದೂ ರಾಷ್ಟ್ರ ಅಲ್ಲ, ನಮ್ಮ ದೇಶ ಜಾತ್ಯತೀತ ರಾಷ್ಟ್ರ

ಮೈಸೂರು: ನಮ್ಮ ಪ್ರಧಾನಮಂತ್ರಿಗೆ, ನಮ್ಮ ಗೃಹ ಮಂತ್ರಿಗೆ ಹಾಗೂ ನಮ್ಮ ಸಿಎಂಗೆ ಒಂದೊಂದು ಕಾಲದಲ್ಲಿ ಒಂದೊಂದು ಕಳಂಕ ಅಂಟಿಸುವ ಕೆಲಸ ಮಾಡಿದರು. ಆದರೆ ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು. ಈಗ ಪೌರತ್ವ ಕಾಯ್ದೆ ವಿಚಾರದಲ್ಲೂ ಕಳಂಕ ಅಂಟಿಸಲು ವಿಪಕ್ಷಗಳು ಸಂಕಲ್ಪ ಮಾಡಿವೆ. ಇದನ್ನು ನಾವೆಲ್ಲಾ ಸೇರಿ ತಪ್ಪಿಸಬೇಕು. ಜನರಿಗೆ ವಾಸ್ತವ ತಿಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ 2019 ಒಂದು ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಎಲ್ಲಾ ಕಡೆ ಮಸೀದಿಗಳಿವೆ. ಎಲ್ಲೂ ಅವರಿಗೆ ಅವಕಾಶ ನಿರಾಕರಿಸಿಲ್ಲ. ಮುಸ್ಲಿಮರು ಈ ದೇಶದಲ್ಲಿ ಏರಬೇಕಾದ ಎಲ್ಲಾ ಉನ್ನತ ಸ್ಥಾನ ಏರಿದ್ದಾರೆ. ಇದಕ್ಕೆ ಯಾರು ಅಡ್ಡಿ ಬಂದಿಲ್ಲ. ಈ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್‍ರಿಗೆ ಯಾವತ್ತೂ ತೊಂದರೆ ಆಗಿಲ್ಲ. ಮುಸ್ಲಿಮರು ಕ್ರಿಶ್ಚಿಯನ್ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಆದರೆ ಬೇರೆ ದೇಶದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ ಎಂದರು.

ಭಾರತದಲ್ಲಿ ಸದಾ ಕಾಲಕ್ಕೂ ಮುಸ್ಲಿಮರು ಸುಶಿಕ್ಷಿತರಾಗಿರುತ್ತಾರೆ. ದೇಶದಲ್ಲಿನ ಎಲ್ಲಾ ಅಲ್ಪಸಂಖ್ಯಾತ ಜನರು ಇಲ್ಲಿ ಸದಾ ಸುರಶಿಕ್ಷಿತರಾಗಿರುತ್ತಾರೆ ಅನುಮಾನಗಳೇ ಬೇಡ. ನಮ್ಮ ದೇಶ ಹಿಂದೂ ರಾಷ್ಟ್ರ ಅಲ್ಲ, ನಮ್ಮ ದೇಶ ಜಾತ್ಯತೀತ ರಾಷ್ಟ್ರ. ಆದರೆ ನಮ್ಮ ಪಕ್ಕದ ದೇಶಗಳು ಧರ್ಮದ ದೇಶಗಳಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬೇರೆ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಜನರಲ್ಲಿ ಶೇಕಡಾ 68 ಜನರು ದಲಿತರು, ಅವರಿಗೆ ಪೌರತ್ವ ಕೊಡೋದು ತಪ್ಪಾ? ಅವರಿಗೆ ನಾವು ಪೌರತ್ವ ಕೊಡೋದೆ ಇನ್ಯಾರಿಗೆ ಕೊಡಬೇಕು? ಇದು ದಲಿತರ ವಿರೋಧಿ ಕಾಯ್ದೆ ಎಂದು ಅಪ್ರಚಾರ ಮಾಡ್ತಿರಾ? ಎಂದು ಪ್ರಶ್ನಿಸಿದರು.

ಪೌರತ್ವ ಕಾಯ್ದೆ ಹೋರಾಟದಿಂದ ಕಾಂಗ್ರೆಸ್‍ನ ಕೆಲ ನಾಯಕರೆ ಹಿಂದೆ ಸರಿಯುತ್ತಿದ್ದಾರೆ. ಅವರಿಗೆ ಇದು ರಾಜಕೀಯವಾಗಿ ತಮಗೆ ತೊಡಕಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ನಿಧಾನವಾಗಿ ಮುಸ್ಲಿಮರು ಕೂಡ ಈ ಹೋರಾಟದಿಂದ ಹಿಂದೆ ಸರಿಯುತ್ತಿದ್ದಾರೆ. ಕೆಲ ನಗರ ನಕ್ಸಲರು, ಕೆಲ ವಿಚಾರವಾದಿಗಳು, ಕೆಲ ಮುಸ್ಲಿಂ ಮುಖಂಡರು, ಕೆಲ ನಿರುದ್ಯೋಗಿ ರಾಜಕಾರಣಿಗಳಷ್ಟೇ ಇದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *