ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ, ಬೇರೆಯವ್ರ ಸಹಾಯದಿಂದ ಮಾಡಿದ್ದಾನೆ: ಖಾದರ್

– ಸಮಾಜದ್ರೋಹಿ ಶಕ್ತಿಗಳು ಎಲ್ಲ ವರ್ಗದಲ್ಲಿವೆ

ಮಂಗಳೂರು: ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ, ಬೇರೆಯವರ ಸಹಾಯದಿಂದ ಮಾಡಿದ್ದಾನೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳೂರು ಬಾಂಬರ್ ಬಂಧನ ವಿಚಾರವಾಗಿ ಮಾತನಾಡಿದ ಅವರು, ಇದೊಂದು ಗಂಭೀರ ವಿಚಾರ. ಸಮಾಜದ್ರೋಹಿ ಶಕ್ತಿಗಳು ಎಲ್ಲಾ ವರ್ಗದಲ್ಲಿ ಇದ್ದಾರೆ. ಒಂದೇ ವರ್ಗವನ್ನು ಗುರಿಯಾಗಿಸಬಾರದು. ಆರೋಪಿಯನ್ನು ಪತ್ತೆ ಹಚ್ಚುವ ಮೊದಲೇ ಸಮುದಾಯವನ್ನು ಗುರಿಯಾಗಿಸಿದ್ದಾರೆ ಎಂದು ಕಿಡಿಕಾರಿದರು.

ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಬೇರೆಯವರ ಸಹಾಯದಿಂದ ಮಾಡಿದ್ದಾನೆ. ಆರೋಪಿಗೆ ತಲೆ ಸರಿಯಿಲ್ಲ ಅಂತ ಹೇಳುತ್ತಾರೆ, ಆರೋಪಿಗೆ ಬಾಂಬ್ ಫಿಕ್ಸ್ ಮಾಡುವುದಕ್ಕೆ ಸರಿಯಿದ್ಯಾ? ಆರೋಪಿ ಬೆಂಗಳೂರು ಮುಟ್ಟುವ ತನಕ ಪೊಲೀಸರು ಎಲ್ಲಿದ್ದರು. ಎಲ್ಲಾ ಸ್ಕ್ಯಾಡ್‍ಗಳು ಎಲ್ಲಿ ಹೋಗಿತ್ತು ಎಂದು ಖಾದರ್ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದರು. ಇದನ್ನು ಓದಿ: ಆದಿತ್ಯ ಶರಣಾಗಿರೋದು ನಾಟಕ, ಬೆಂಗ್ಳೂರಿಗೆ ಬಂದಿದ್ದು ಹೇಗೆ – ಎಚ್‍ಡಿಕೆ ಪ್ರಶ್ನೆ

ಪೊಲೀಸರ ಬಳಿ ಸಿಸಿಟಿವಿ ದೃಶ್ಯ ಇತ್ತು. ಎಲ್ಲ ಮಾಹಿತಿಗಳೂ ಪೊಲೀಸರ ಬಳಿ ಇತ್ತು. ಆದರೂ ಆರಾಮಾಗಿ ಆತ ಬೆಂಗಳೂರಿಗೆ ಹೋಗಿದ್ದಾನೆ. ಆರಾಮಾಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಇದರ ಹಿಂದೆ ದೊಡ್ಡ ಸಂಚು ಇದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಖಾದರ್ ಆಗ್ರಹಿಸಿದರು.

ಕಳೆದ ಸೋಮುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಬಳಿ ಒಂದು ಕಪ್ಪು ಲ್ಯಾಪ್ ಟಾಪ್ ಪತ್ತೆಯಾಗಿತ್ತು. ನಂತರ ಅದನ್ನು ಪರೀಕ್ಷಿಸಿದಾಗ ಬಾಂಬ್ ಇರುವುದು ಪತ್ತೆಯಾಗಿದ್ದು, ಬಳಿಕ ಅದನ್ನು ಕೆಂಜಾರು ಮೈದಾನದಲ್ಲಿ ಸ್ಫೋಟಿಸಿ ನಿಷ್ಕ್ರಿಯ ಮಾಡಲಾಗಿತ್ತು. ಬಾಂಬ್ ಅನ್ನು ಅಲ್ಲಿಗೆ ತಂದು ಇಟ್ಟಿದ್ದ ವ್ಯಕ್ತಿಯ ಫೋಟೋಗಳು ಸಿಸಿಟಿವಿಯಲ್ಲಿ ಲಭ್ಯವಾಗಿದ್ದವು. ಆದರೆ ಇಂದು ಆರೋಪಿ ಆದಿತ್ಯ ರಾವ್, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ತೆರಳಿ ನಾನೇ ಬಾಂಬ್ ಇಟ್ಟಿದ್ದು ಎಂದು ಶರಣಾಗಿದ್ದನು. ಸದ್ಯ ಆತನನ್ನು ಬೆಂಗಳೂರು ಪೊಲೀಸರು ಮಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಮಂಗಳೂರಿಗೆ ಕರೆದೊಯ್ದಿದ್ದಾರೆ. ನಾಳೆ 6 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

Comments

Leave a Reply

Your email address will not be published. Required fields are marked *