ಆರ್‌ಎಸ್‌ಎಸ್‌, ವಿಎಚ್‍ಪಿ ವಿರುದ್ಧ ಎಚ್‍ಡಿಕೆ ಸ್ಫೋಟಕ ಆರೋಪ

ಕಲಬುರಗಿ: ಮಂಗಳೂರುನಲ್ಲಿ ಬಾಂಬ್ ಪತ್ತೆ ಮತ್ತು ಹಿಂದುತ್ವ ಪ್ರತಿಪಾದಕ ನಾಯಕರ ಹತ್ಯೆಯ ರೂವಾರಿಗಳ ಬಂಧನದ ಹಿಂದೆ ಬಿಜೆಪಿ ಹಲವಾರು ಕಥೆಗಳನ್ನು ಕಟ್ಟುತ್ತಿದೆ. ಆರ್ ಎಸ್‍ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಪ್ರಭಾಕರ್ ಭಟ್ ತಮ್ಮ ರಿಮೋಟ್ ಕಂಟ್ರೋಲ್ ಬಿಜೆಪಿಯನ್ನು ಇಟ್ಟುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಗಂಭೀರ ಆರೋಪವನ್ನು ಮಾಡಿದ್ದಾರೆ.

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಲಬುರಗಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಲು ನಾನು ಮಂಗಳೂರಿಗೆ ಹೋಗಿದ್ದೆ. ಬಾಂಬ್ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಮಾಡಲು ಹೊರಟಿದೆ. ಬಿಜೆಪಿಯ ಬ್ಯಾಕ್ ಸೀಟ್‍ನಲ್ಲಿ ವಿಶ್ವಹಿಂದೂ ಪರಿಷತ್ತಿದೆ. ಅಮಿತ್ ಶಾ, ನೆಹರು ಅವರು ಮಾಡಿದ ತಪ್ಪು ತಿದ್ದುತ್ತೇನೆ ಎಂದು ಭಾಷಣ ಮಾಡುತ್ತಾರೆ. ಆದರೆ ನೆಹರು ಬದುಕಿದ್ದ ಕಾಲಮಾನದಲ್ಲಿ ಅಮಿತ್ ಶಾ ಇನ್ನೂ ಹುಟ್ಟಿರಲಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಪೀರ ಬೆಂಗಾಲಿ ಮೈದಾನದಲ್ಲಿ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಉತ್ತರ ಕರ್ನಾಟಕದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಇನ್ನೂ ಸಮಾವೇಶದ ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಕಮ್ಯುನಿಸ್ಟ್ ಪಾರ್ಟಿ ರಾಷ್ಟ್ರೀಯ ವಕ್ತಾರ ಸೀತಾರಾಮ ಯಚೂರಿ, ಸ್ವಾಮಿ ಅಗ್ನಿವೇಶ್, ಸಿಎಂ ಇಬ್ರಾಹಿಂ, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಭಾಗಿಯಾಗಿದ್ದರು.

ಇದೇ ವೇಳೆ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ಪೀಪಲ್ಸ್ ಫಾರ್ಮ್ ನಿಂದ ರಾಷ್ಟ್ರಪತಿಗಳ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಸಂದೇಶ ರವಾನಿಸಲಾಯಿತು. ವೇದಿಕೆ ಮೇಲಿದ್ದ ಮುಖಂಡರುಗಳು ಪಕ್ಷಾತೀತವಾಗಿ ಕಾಯ್ದೆ ವಿರುದ್ಧ ಕೈ ಜೋಡಿಸಿ, ಮೋದಿ ಮತ್ತು ಅಮಿತ್ ಶಾ ವಿರುದ್ಧ ಗುಡುಗಿದರು. ಇದನ್ನು ಓದಿ:  ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

Comments

Leave a Reply

Your email address will not be published. Required fields are marked *