‘ಫ್ರೀ ಕಾಶ್ಮೀರ’ ಪ್ಲೇ ಕಾರ್ಡ್ ಪ್ರದರ್ಶನ ಕೇಸ್- ವಕಾಲತ್ತಿಗೆ ವಕೀಲರ ಸಹಿ ದುರ್ಬಳಕೆ ಆರೋಪ

ಮೈಸೂರು: ಮಾನಸಗಂಗೋತ್ರಿ ‘ಫ್ರೀ ಕಾಶ್ಮೀರ’ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣದಲ್ಲಿ ಆರೋಪಿ ಪರ ವಕಾಲತ್ತಿನಿಂದ ಇಬ್ಬರು ಮೈಸೂರು ವಕೀಲರು ಹಿಂದೆ ಸರಿದಿದ್ದು, ವಕಾಲತ್ತು ಅರ್ಜಿ ದುರ್ಬಳಕೆ ಮಾಡಲಾಗಿದೆ ಎಂದು ಮೈಸೂರು ವಕೀಲರ ಸಂಘಕ್ಕೆ ದೂರು ನೀಡಿದ್ದಾರೆ.

ವಕೀಲರಾದ ಶ್ರೀಕೃಷ್ಣ ಹಾಗೂ ನಾಗರಾಜು ಅವರು ದೂರು ನೀಡಿದ್ದಾರೆ. ನಿನ್ನೆ ಮೈಸೂರು ಜಿಲ್ಲಾ ನ್ಯಾಯಾಲಯದ ವಕೀಲರಿಂದ ವಕಾಲತ್ತು ಸಲ್ಲಿಕೆ ಆಗಿತ್ತು. ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಕಾಲತ್ತು ಸ್ವೀಕರಿಸಿದ್ದರು. ಆದರೆ, ವಕೀಲರಿಗೆ ವಕಾಲತ್ತಿನ ವಿಚಾರವೇ ತಿಳಿಸದೆ ಸಹಿ ಪಡೆಯಲಾಗಿದೆ ಎಂದು ಈ ಇಬ್ಬರು ವಕೀಲರು ಆರೋಪಿಸಿದ್ದಾರೆ.

‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶನ ಪ್ರಕರಣದ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ಸಂಘದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಕೆಲವರು ನಮ್ಮ ಸಹಿ ಪಡೆದು ಅದನ್ನು ದುರುಪಯೋಗಪಡಿಸಿಕೊಂಡು ದುರ್ಬಳಕೆ ಮಾಡಿದ್ದಾರೆ. ಸಂಘದ ನಿರ್ಣಯಕ್ಕೆ ಬದ್ಧರಾಗಿ ವಕಾಲತ್ತಿನಿಂದ ಹಿಂದೆ ಸರಿಯುತ್ತೇವೆ ಎಂದು ಈ ಇಬ್ಬರು ವಕೀಲರು ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ಗೆ ಪತ್ರ ಬರೆದಿದ್ದಾರೆ. ಈ ಪತ್ರದ ಜೊತೆ ವಕಾಲತ್ತು ವಾಪಸ್ಸು ಪಡೆಯುವ ಅರ್ಜಿಯನ್ನು ಲಗತ್ತಿಸಿದ್ದಾರೆ.

ಮೈಸೂರು ಜಿಲ್ಲಾ ನ್ಯಾಯಾಲಯದ ಯುವ ವಕೀಲರು ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಬೇಡಿ. ಈ ಹಿಂದೆ ಸಹ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪರ ಜಿಲ್ಲಾ ನ್ಯಾಯಾಲಯದ ವಕೀಲರು ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಹೀಗಾಗಿ ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಗೆ ಮನವಿ ಸಲ್ಲಿಸಿದ್ದರು.

Comments

Leave a Reply

Your email address will not be published. Required fields are marked *