ಸಂಪುಟ ವಿಸ್ತರಣೆಯಾದರೆ ಸರ್ಕಾರದಲ್ಲಿ ಸ್ಫೋಟ ನಿಶ್ಚಿತ: ಸಿದ್ದರಾಮಯ್ಯ

ಮೈಸೂರು: ಉಪಚುನಾವಣೆಯಲ್ಲಿ ಗೆದ್ದವರ ಸ್ಥಿತಿ ಅಂತರ್ ಪಿಶಾಚಿಗಳಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಗೆದ್ದವರನ್ನು ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲಿಲ್ಲ. ಹೀಗಾಗಿ ಅವರ ಸ್ಥಿತಿ ಅಂತರ್ ಪಿಶಾಚಿಗಳಂತಾಗಿದೆ. ಅಲ್ಲದೆ ಒಂದು ವೇಳೆ ಸಂಪುಟ ವಿಸ್ತರಣೆಯಾದರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಫೋಟ ಸಂಭವಿಸಲಿದೆ ಎಂದು ತಿಳಿಸಿದರು.

ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ನೀಡುವುದಿಲ್ಲ. ಮಂತ್ರಿ ಸ್ಥಾನ ಕೊಡದಿದ್ದರೆ ಏನಾಗುತ್ತದೆ ನೋಡಿಕೊಳ್ಳಿ ಎಂದು ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಹೀಗಾಗಿ ಮುಂದೆ ಏನಾಗುತ್ತದೆ ಎಂದು ನೀವೆ ನೋಡಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಮೈತ್ರಿ ಸರ್ಕಾರ ನಂತರ ಈ ಸರ್ಕಾರ ಬಂದು 6 ತಿಂಗಳಾಗಿದೆ. ಅಂದಿನಿಂದ ಸರ್ಕಾರವೇ ಇಲ್ಲ. ಇವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇನ್ನೂ ಮಂತ್ರಿ ಮಂಡಲ ರಚನೆಯಾಗಿಲ್ಲ. ಇಲ್ಲದ ಸರ್ಕಾರಕ್ಕೆ ಸರ್ಕಾರ ಟೇಕಾಫ್ ಆಗ್ತಾ ಇದೆ ಅಂತ ಹೇಳಲು ಆಗುವುದಿಲ್ಲ ಎಂದು ಟೀಕಿಸಿದರು.

ಶೀಘ್ರವೇ ನೇಮಕ:
ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಆಗಬೇಕು ಎಂಬ ಅಭಿಪ್ರಾಯವನ್ನು ಹೈಕಮಾಂಡಿಗೆ ತಿಳಿಸಿದ್ದೇನೆ. ಎಲ್ಲದನ್ನೂ ಹೈಕಮಾಂಡ್ ಚಿಂತಿಸಿ, ಆದಷ್ಟು ಬೇಗ ಅಧ್ಯಕ್ಷರ ನೇಮಕ ಮಾಡುತ್ತದೆ. ಆದಷ್ಟು ಬೇಗ ನೇಮಕವಾಗಲಿ ಎಂದು ನಾನೂ ಒತ್ತಾಯಿಸಿದ್ದೇನೆ. ಯಾರು ನೇಮಕವಾಗಬೇಕೆಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ದೊಡ್ಡ ವಿಚಾರವಲ್ಲ, ಇದಕ್ಕಿಂತ ದೊಡ್ಡವಿಚಾರ ಸರ್ಕಾರದ ಮಂತ್ರಿ ಮಂಡಲ ರಚನೆ ಎಂದರು.

Comments

Leave a Reply

Your email address will not be published. Required fields are marked *