ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಣ್ಣಾವ್ರು -ವಿಷ್ಣು ದಾದ ಹಾಡುಗಳ ಕಂಪು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ ಭರ್ಜರಿಯಾಗಿ ನಡೆಯಿತು. ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಯ್ತು. ಬೆಂಗಳೂರಿಗರಿಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಭಾರತದ ಬ್ಯಾಟ್ಸ್ ಮನ್ ಗಳು ರಸದೌತಣ ನೀಡಿದರು. ಇದು ನಿಜವಾದ ವಿಶೇಷ ಅಲ್ಲ. ಪಂದ್ಯದಲ್ಲಿ ಕನ್ನಡದ ವೈಭವ ಹಬ್ಬಿದ್ದು ವಿಶೇಷ. ಹೌದು. ನಿನ್ನೆಯ ಪಂದ್ಯದಲ್ಲಿ ಕನ್ನಡ ಹಾಡುಗಳ ಕಂಪು ಎಲ್ಲರನ್ನೂ ಮನಸೋರೆಗೊಳಿಸಿತು.

ಪಂದ್ಯ ಪ್ರಸಾರದವಾದ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಈಗ ಕನ್ನಡ ವೀಕ್ಷಕ ವಿವರಣೆ ಲಭ್ಯವಾಗುತ್ತಿದೆ. ನಿನ್ನೆಯ ವೀಕ್ಷಕ ವಿವರಣೆ ಪ್ಯಾನಲ್ ಸಖತ್ ವಿಶೇಷವಾಗಿತ್ತು. ಭಾರತದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್ ಹಾಗೂ ವಿಜಯ್ ಭಾರದ್ವಾಜ್ ನಿನ್ನೆ ವೀಕ್ಷಕ ವಿವರಣೆ ಜೊತೆ ಕನ್ನಡ ಹಾಡುಗಳ ಸುಧೆ ಹರಿಸಿ ಕೇಳುಗರ ಮನ ಗೆದ್ದರು.

ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಈ ಇಬ್ಬರು ಮಾಜಿ ಆಟಗಾರರು ಪದ್ಮಭೂಷಣ ಡಾ.ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್ ಹಾಡುಗಳನ್ನು ಹಾಡೋ ಮೂಲಕ ಕನ್ನಡದ ಕಂಪು ಹರಿಸಿದರು. ವೆಂಕಟೇಶ್ ಪ್ರಸಾದ್ ಅಂತು ಅದ್ಭುತವಾಗಿ ಕಾಮೆಂಟ್ರಿ ಜೊತೆ ಹಾಡನ್ನು ಹಾಡಿ ಎಲ್ಲರ ಮನಗೆದ್ದರು. ಇದನ್ನೂ ಓದಿ: ಆಸೀಸ್ ವಿರುದ್ಧ ರೋಹಿತ್, ವಿರಾಟ್ ಅಬ್ಬರ- ಸರಣಿ ಗೆದ್ದ ಭಾರತ

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಜಿಮ್ಮಿಗಲ್ಲು’ ಚಿತ್ರದ ‘ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ’ ಹಾಡು ಹಾಡಿದರು. ಅದಲ್ಲದೆ ರಾಜ್ ಕುಮಾರ್ ಅವರ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ’ ಗೀತೆ ಹಾಗೂ ‘ವಿಜಯನಗರ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡು ಹೇಳಿ ಮನರಂಜನೆ ನೀಡಿದರು.

ವಿಜಯ್ ಭಾರದ್ವಾಜ್ ‘ಭಕ್ತ ಕುಂಬಾರ’ ಚಿತ್ರದ ‘ಮಾನವ ದೇಹವು ಮೂಳೆ ಮಾಂಸದ ತಡಿಕೆ’ ಹಾಡು ಮತ್ತು ದಾಸರ ಪದವನ್ನ ಹಾಡಿ ಮುದ ನೀಡಿದರು. ಈ ಇಬ್ಬರ ಕನ್ನಡ ಹಾಡಿನ ಮೋಡಿಗೆ ಜನರು ಕೂಡ ಟ್ವೀಟ್ ಮಾಡಿ ಅಭಿನಂದನೆಗಳ ಮಹಾಪೂರ ಹರಿಸಿದರು.

Comments

Leave a Reply

Your email address will not be published. Required fields are marked *