ಭಜರಂಗಿ-2 ಸಿನಿಮಾ ಸೆಟ್‍ನಲ್ಲಿ ಮತ್ತೆ ಬೆಂಕಿ ಅವಘಡ

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನಟ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ಸೆಟ್ಟಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಇದೀಗ ಮತ್ತೆ ಅಗ್ನಿ ಅವಘಡ ಸಂಭವಿಸಿದ್ದು, ಆತಂಕಕ್ಕೀಡು ಮಾಡಿದೆ.

ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಬಳಿಯ ಮೋಹನ್.ಬಿ.ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣದ ಸೆಟ್ ಹಾಕಲಾಗಿತ್ತು. ಭಾರೀ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸೆಟ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದೇ ಸೆಟ್ಟಿನಲ್ಲಿ ಇತ್ತೀಚೆಗಷ್ಟೇ ಬೆಂಕಿ ಅವಘಡ ಸಂಭವಿಸಿತ್ತು. ಇದೀಗ ಮತ್ತೆ ಅಗ್ನಿ ಅನಾಹುತ ಸಂಭವಿಸಿದ್ದು, ಆತಂಕ ಸೃಷ್ಟಿಸಿದೆ. ಶೂಟಿಂಗ್ ಸ್ಥಳದಲ್ಲಿ 400ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

2 ಅಗ್ನಿಶಾಮಕದಳ ತಂಡದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಸೆಟ್‍ನಲ್ಲಿದ್ದ 400ಕ್ಕೂ ಹೆಚ್ಚು ಕಲಾವಿದರು, ಸಹಕಲಾವಿದರೂ, ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರತಂಡದ ನಿರ್ಲಕ್ಷ್ಯವೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೆಂಕಿ ಅವಘಡದ ಬಳಿಕ ಚಿತ್ರತಂಡ ಆತಂಕಕ್ಕೊಳಗಾಗಿದ್ದು, ಬೆಂಕಿ ನಂದಿಸಲು ಹರಸಾಹಸ ನಡೆದಿದೆ. ಈ ಮೂಲಕ ಭಜರಂಗಿ-2 ಸಿನಿಮಾ ಪದೇ ಪದೆ ಅವಘಡಗಳಿಗೆ ತುತ್ತಾಗುತ್ತಿದೆ. ಬೆಂಕಿ ಅವಘಡದ ಬಳಿಕ ಶೂಟಿಂಗ್ ಸ್ಥಗಿತಗೊಂಡಿದ್ದು, ನಟ ಶಿವರಾಜ್ ಕುಮಾರ್ ಸಹ ಸಿನಿಮಾ ಸೆಟ್ಟಿನಿಂದ ಹೊರಟಿದ್ದಾರೆ.

2 ದಿನಗಳ ಹಿಂದೆ ಬೆಂಕಿ ಅವಘಡ, ಅಲ್ಲದೆ ಶನಿವಾರ ಬಸ್ ಅಪಘಾತವಾಗಿತ್ತು. ಎರಡು ದಿನದ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ನಂತರವೂ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ತಂಡದ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಳೆದೊಂದು ವಾರದಲ್ಲಿ ಇದು ಮೂರನೇ ಅವಘಡವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವೇಳೆ ನಾನೂ ಸ್ಥಳದಲ್ಲಿದ್ದೆ, ಘಟನೆಯಿಂದ ಆಘಾತವಾಯಿತು, ದೇವರ ದಯೆಯಿಂದ ಯಾರಿಗೂ ಅಪಾಯ ಸಂಭವಿಸಿಲ್ಲ. ಮುಂದೆ ಎಚ್ಚರಿಕೆಯಿಂದ ಇರುತ್ತೇವೆ ಎಂದು ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಕಿ ಅವಘಡದಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದ್ದು, ಸದ್ಯಕ್ಕೆ ಚಿತ್ರೀಕರಣ ಮಾಡದಿರಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *