ಕಳ್ಳರ ಹಾಟ್ ಸ್ಪಾಟ್‍ಗೆ ಬ್ರೇಕ್ ಹಾಕಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಬೆಂಗಳೂರು: ಕಳ್ಳರ ಹಾಟ್ ಸ್ಪಾಟ್ ಆಗಿದ್ದ ಅಂಡರ್ ಪಾಸ್ ಮುಂದೆ ಜೆಸಿಬಿ ಮೂಲಕ ಗುಂಡಿ ತೆಗೆಯುವ ಮೂಲಕ ನೆಲಮಂಗಲ ಟೌನ್ ಪೊಲೀಸರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್‍ನ ಅಂಡರ್ ಪಾಸ್ ಬಳಿ ಸಂಚಾರಿ ಹಾಗೂ ನೆಲಮಂಗಲ ಟೌನ್ ಪೊಲೀಸರು ಗುಂಡಿ ತೆಗೆಸಿ, ಖಡಕ್ ಎಚ್ಚರಿಕೆ ನೀಡಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಖಡಕ್ ಐಪಿಎಸ್ ಅಧಿಕಾರಿ ರವಿ.ಡಿ ಚೆನ್ನಣ್ಣನವರ್ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದು, ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗುತ್ತಿದೆ ಎನ್ನಲಾಗಿದೆ.

ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ಮಂಗಳೂರು ಹಾಗೂ ನೆಲಮಂಗಲ ಪುಣೆ ರಾಷ್ಟ್ರೀಯ ಹೆದ್ದಾರಿ ಕಳ್ಳರ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಹೆದ್ದಾರಿ ಕಳ್ಳರ ಹಾಟ್ ಸ್ಪಾಟ್‍ಗೆ, ನೆಲಮಂಗಲ ಟೌನ್ ಪೊಲೀಸರು ನೂತನ ತಂತ್ರಗಾರಿಕೆ ಉಪಯೋಗಿಸಿದ್ದಾರೆ.

ಕುಣಿಗಲ್ ಬೈಪಾಸ್‍ನ ಅಂಡರ್ ಪಾಸ್ ಬಳಿ ಜೆಸಿಬಿ ಮೂಲಕ ಗುಂಡಿ ತೆಗೆದು ಎಚ್ಚರಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನೂ ಈಗಾಗಲೇ ಅಂಡರ್ ಪಾಸ್ ಕೆಳಗೆ ವಾಹನ ನಿಲುಗಡೆ ತಡೆಗೆ ನಿರ್ಬಂಧ ಏರಿದ್ದ ಟೋಲ್ ಕಂಪನಿ, ಇದೀಗ ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ.

ಅಂಡರ್ ಪಾಸ್ ನಲ್ಲಿ ವಾಹನ ನಿಲುಗಡೆ ಮಾಡಿ ಕಳ್ಳತನ ಕೃತ್ಯ ಎಸಗುತ್ತಿದ್ದ ಖರ್ತನಾಖ್ ಟೀಂಗಳಿಗೆ ಬ್ರೇಕ್ ಹಾಕಿದಂತಾಗಿದೆ. ಈ ಹಿಂದೆ ಕಳ್ಳತನ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳರ ಟೀಂಗೆ ಪೊಲೀಸರು ಖಡಕ್ ಸಂದೇಶ ರವಾನಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅನಧಿಕೃತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೆಲ ಕಿಡಿಗೇಡಿಗಳು ಈ ಅಂಡರ್ ಪಾಸ್ ಬಳಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದು, ಮಹಿಳೆಯರ ಮಕ್ಕಳ ಮುಜುಗರಕ್ಕೆ ಕಾರಣವಾಗಿತ್ತು. ಜನರ ದೂರಿನ ಹಿನ್ನೆಲೆ ಕೈಗೊಂಡ ಪೊಲೀಸರ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *