ದ್ವೀತಿಯ ಪಿಯುಸಿ ಉತ್ತರ ಪತ್ರಿಕೆ ಪುಟಗಳ ಸಂಖ್ಯೆ ಹೆಚ್ಚಳ

– ಎಕ್ಸಾಂ ಹಾಲ್‍ನಲ್ಲಿ ಸಿಬ್ಬಂದಿಗೂ ಮೊಬೈಲ್ ನಿಷೇಧ

ಬೆಂಗಳೂರು: ದ್ವೀತಿಯ ಪಿಯುಸಿ ಪರೀಕ್ಷೆಗೆ ಸಿದ್ಧತೆಗಳು ಪ್ರಾರಂಭವಾಗಿದೆ. ಮಾರ್ಚ್ ನಲ್ಲಿ ನಡೆಯಲಿರುವ ಪರೀಕ್ಷೆ ಸುಸೂತ್ರವಾಗಿ ನಡೆಯಲು ಖುದ್ದು ಶಿಕ್ಷಣ ಸಚಿವರು ಅಖಾಡಕ್ಕೆ ಇಳಿದಿದ್ದಾರೆ. ಸ್ವತಃ ಸಚಿವ ಸುರೇಶ್ ಕುಮಾರ್ ಪರೀಕ್ಷೆ ಸಿದ್ಧತೆ ಬಗ್ಗೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಾರಿಯ ಪರೀಕ್ಷೆ ಹತ್ತು-ಹಲವು ವಿಶೇಷಗಳಿಗೆ, ಹೊಸ ನಿಯಮಗಳಿಗೆ ಸಾಕ್ಷಿಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಲುವಾಗಿ ದ್ವೀತಿಯ ಪಿಯುಸಿ ಉತ್ತರ ಪತ್ರಿಕೆಯ ಪುಟಗಳ ಸಂಖ್ಯೆಯನ್ನ ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ 24 ಪುಟಗಳ ಬುಕ್ ಲೆಟ್‍ನ್ನ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು. ಇದರಿಂದ ಮಕ್ಕಳು ಹೆಚ್ಚುವರಿ ಉತ್ತರ ಪತ್ರಿಕೆಗೆ ಬೇಡಿಕೆ ಇಡುತ್ತಿದ್ದರು. ಈ ಸಮಸ್ಯೆಯನ್ನ ನಿವಾರಿಸಲು ಈ ವರ್ಷದಿಂದ 40 ಪುಟಗಳ ಉತ್ತರ ಪತ್ರಿಕೆ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ.

ಇಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ನಿಷೇಧ ಮಾಡಲಾಗಿತ್ತು. ಆದರೆ ಈ ಬಾರಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋ ಎಲ್ಲಾ ಸಿಬ್ಬಂದಿಗೂ ಮೊಬೈಲ್ ಫೋನ್ ನಿಷೇಧ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಸಮಸ್ಯೆಯನ್ನು ತಡೆಯಲು ಎಂದಿನಂತೆ ಈ ವರ್ಷವೂ ಎಕ್ಸಾಂಮಿನೇಷನ್ ಸೆಕ್ಯೂರ್ ಸಿಸ್ಟಮ್ ಅಳವಡಿಕೆ ಮಾಡಲಾಗುತ್ತಿದೆ. ಫೆಬ್ರವರಿಯಲ್ಲೆ ಪ್ರಶ್ನೆ ಪತ್ರಿಕೆ ಖಜಾನೆಗಳ ಭದ್ರತೆ ಕೆಲಸ ಪ್ರಾರಂಭವಾಗಲಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಖಜಾನೆಯ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ತಕ್ಷಣ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ, ಪರೀಕ್ಷಾ ಕೇಂದ್ರದ ಸಿಬ್ಬಂದಿ, ಉತ್ತರ ಪತ್ರಿಕೆ ರವಾನೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *