ಬಿಬಿಎಂಪಿ ಮೇಲೆ ಜೆಡಿಎಸ್ ಕಣ್ಣು- ಪಕ್ಷ ಸಂಘಟನೆಗೆ ದೇವೇಗೌಡ್ರ ಹೊಸ ಅಸ್ತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ 7-8 ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ಚುನಾವಣಾ ಅಖಾಡಕ್ಕೆ ಇಳಿದಿದೆ. ಈ ಬಾರಿ ಹೇಗಾದರೂ ಮಾಡಿ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಪಣ ತೊಟ್ಟಿರುವ ದೇವೇಗೌಡರು ಸಿದ್ಧತೆ ಆರಂಭಿಸಿದ್ದಾರೆ. ಬೆಂಗಳೂರಿನ ನಾಯಕರ ಸಭೆ ಮಾಡಿ ಪಕ್ಷ ಸಂಘಟನೆಯ ಪಾಠ ಮಾಡಿದ್ದಾರೆ.

ಕಳೆದ 4 ವರ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಬಿಬಿಎಂಪಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ವರ್ಷ ಬಿಜೆಪಿಗೆ ಅಧಿಕಾರ ಹೋಗಿದೆ. ಹೀಗಾಗಿ ಮುಂದೆ ಇಂತಹ ಸಮಸ್ಯೆ ಆಗದಂತೆ ಎಚ್ಚರವಹಿಸಿ, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯೋಕೆ ಹೊಸ ತಂತ್ರಗಾರಿಕೆ ರೆಡಿ ಮಾಡಿಕೊಂಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿಯ ಕಾರ್ಯಕ್ರಮಗಳೇ ಜೆಡಿಎಸ್‍ಗೆ ಪ್ರಚಾರದ ಅಸ್ತ್ರ. ಸಿಎಂ ಆಗಿದ್ದಾಗ ಬೆಂಗಳೂರಿಗೆ ಕುಮಾರಸ್ವಾಮಿ ವಿಶೇಷ ಕಾಳಜಿ ಕೊಟ್ಟಿದ್ದರು. ಒಂದು ಲಕ್ಷ ಮನೆ ನಿರ್ಮಾಣ, ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಹೀಗೆ ಅನೇಕ ಕಾರ್ಯಕ್ರಮಗಳಿಗೆ ಕುಮಾರಸ್ವಾಮಿ ವೇಗವಾದ ಚಾಲನೆ ನೀಡಿದ್ದರು. ಇದರ ಜೊತೆಗೆ ರೈತರ ಸಾಲಮನ್ನಾ, ಜನತಾ ದರ್ಶನದ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಜನಪ್ರಿಯರಾಗಿದ್ದರು. ಇವೆಲ್ಲ ಕಾರ್ಯಕ್ರಮಗಳನ್ನು ಮನೆ-ಮನೆ ಪ್ರಚಾರ ಮಾಡುವ ಪ್ಲಾನನ್ನು ಜೆಡಿಎಸ್ ಸಿದ್ಧ ಮಾಡಿಕೊಂಡಿದೆ. ಹಾಲಿ-ಮಾಜಿ ಪಾಲಿಕೆ ಸದಸ್ಯರು ಈ ಕಾರ್ಯಕ್ರಮಗಳನ್ನ ಮನೆ-ಮನೆಗೆ ತಲುಪಿಸುವ ಕೆಲಸ ಮಾಡಬೇಕು ಅನ್ನೋದಾಗಿ ಪಕ್ಷ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸಲು ದೇವೇಗೌಡರು ವಿವಿಧ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಸದಸ್ಯ ನೋಂದಣಿಗೂ ಶೀಘ್ರವೇ ಚಾಲನೆ ನೀಡಲಿದ್ದಾರೆ. ಹೀಗೆ ಹತ್ತು ಹಲವು ಕಾರ್ಯಕ್ರಮ ರೆಡಿ ಮಾಡಿಕೊಂಡಿರೋ ಜೆಡಿಎಸ್, ಈ ಬಾರಿ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ತನ್ನ ಸ್ವಂತ ಬಲದಲ್ಲಿ ಹಿಡಿಯುತ್ತಾ ಎಂಬುದೇ ಸದ್ಯಕ್ಕಿರುವ ಕುತೂಹಲ.

Comments

Leave a Reply

Your email address will not be published. Required fields are marked *