ಮಾನವ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇನೆ: ಡಿಕೆಶಿ

– ಕಪಾಲ ಬೆಟ್ಟದಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ

ಬೆಂಗಳೂರು: ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ ಅಂತ ನಮಗೆ ದೀಕ್ಷೆ ಕೊಟ್ಟಿದ್ದಾರೆ. ಮಾನವ ಧರ್ಮದಲ್ಲಿ ನಂಬಿಕೆ ಇಟ್ಟವನು ನಾನು. ಯಾರು ಬೇಕಾದ್ರು ಅಶಾಂತಿ ವಾತಾವರಣ ಸೃಷ್ಟಿ ಮಾಡಲಿ. ನಾನೇನೂ ಮಾತನಾಡಲ್ಲ. ಬಿಜೆಪಿಯವರು ಅಧಿಕಾರ ಹೆಂಗೆ ಬೇಕಾದರೂ ಉಪಯೋಗ ಮಾಡಿಕೊಳ್ಳಲಿ ಅಂತ ಕಿಡಿಕಾರಿದರು.

ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಹೋಗಿರುವುದರ ಕುರಿತು ಶಾಂತವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಅವರಿಗೆ ಕನಕಪುರದಲ್ಲಿ ಅಸ್ತಿತ್ವ ಇಲ್ಲ. ಹೀಗಾಗಿ ಅಸ್ತಿತ್ವಕ್ಕಾಗಿ ಇಂದು ಕನಕಪುರಕ್ಕೆ ಹೋಗಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರು ಏನು ಬೇಕಾದರೂ ಮಾಡಲಿ. ನಾನೇನು ಮಾತನಾಡಲ್ಲ ಅಂತ ವಾಗ್ದಾಳಿ ನಡೆಸಿದರು.

ಕನಕಪುರಕ್ಕೆ ಬಿಜೆಪಿ ಅವರು ಹೋಗಿ ನಾನು ಮಾಡಿರೋ ಕೆಲಸ ನೋಡಿಕೊಂಡು ಬರಲಿ. ಕಾವೇರಿ ನೀರು, ಸೋಲಾರ್ ವ್ಯವಸ್ಥೆ, ಕಟ್ಟಡ, ರೈತರಿಗೆ ಸಹಾಯ ಮಾಡಿರೋದನ್ನ ಕಣ್ತುಂಬ ನೋಡಿಕೊಂಡು ಬರಲಿ ಅಂತ ಲೇವಡಿ ಮಾಡಿದ್ರು.

ಇದೇ ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧವೂ ಲೇವಡಿ ಮಾಡಿದ ಡಿಕೆಶಿ, ಯಾರು ಅಂತಾನೆ ನನಗೆ ಗೊತ್ತಿಲ್ಲ ಅಂದ್ರು. ಕ್ರೈಸ್ತರು ಕೆಂಪೇಗೌಡ ಪ್ರಾಧಿಕಾರಕ್ಕೆ 5 ಎಕರೆ ಜಾಗ ಕೊಟ್ಟಿದ್ದಾರೆ. ಎಲ್ಲರು ಸಹ ಜೀವನ ನಡೆಸಬೇಕು ಅನ್ನೋದು ನನ್ನ ಆಸೆ. ಅದು ಬಿಟ್ಟು ಬಿಜೆಪಿ ಅವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಏನೇ ಮಾಡಲಿ ನಾನು, ನನ್ನ ತಮ್ಮ, ಕಾರ್ಯಕರ್ತರು ಶಾಂತಿಯಾಗಿ ಇರುತ್ತೇವೆ ಅಂತ ಸಿಡಿಮಿಡಿಗೊಂಡರು.

Comments

Leave a Reply

Your email address will not be published. Required fields are marked *