ಯುವ ಟೆಕ್ಕಿ ಪಾಲಿಗೆ ಆಪತ್ಬಾಂಧವನಾದ ಪೊಲೀಸ್ ಪೇದೆ

ಬೆಂಗಳೂರು: ಕಾಶ್ಮೀರಿ ಯುವತಿ ಟೆಕ್ಕಿ ಪಾಲಿಗೆ ಪೊಲೀಸ್ ಪೇದೆಯೊಬ್ಬರು ಆಪತ್ಬಾಂಧವನಾಗಿದ್ದಾರೆ. ಪೇದೆಯ ಜವಾಬ್ದಾರಿಯುತ ಸಹಾಯದಿಂದ ಯುವತಿಗೆ ಬೆಂಗಳೂರಲ್ಲಿ ಕೆಲಸ ಸಿಕ್ಕಿದೆ.

ಹೌದು. ಕೆಲ ದಿನಗಳ ಹಿಂದೆ ಕೆಲಸ ಅರಸಿ ಸಂದರ್ಶನಕ್ಕೆಂದು ಕಾಶ್ಮೀರದಿಂದ ಮರಿಯಾ ಎಂಬವರು ರಾಜಧಾನಿಗೆ ಬಂದಿದ್ದರು. ಇಲ್ಲಿನ ಮಾನ್ಯತಾ ಟೆಕ್ ಪಾರ್ಕಿನ ಖಾಸಗಿ ಕಂಪನಿಗೆ ಇಂಟರ್ ವ್ಯೂಗೆ ಬಂದಿದ್ದರು. ಈ ವೇಳೆ ಇಂಟರ್ ವ್ಯೂಗೆ ಹೋಗುವ ತರಾತುರಿಯಲ್ಲಿ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸಮೇತವಿದ್ದ ಬ್ಯಾಗ್ ಕಳೆದುಕೊಂಡಿದ್ದರು.

ಇದೇ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ್ದ ಸಂಪಿಗೆಹಳ್ಳಿ ಠಾಣೆಯ ಪೊಲೀಸ್ ಪೇದೆ ಸದಾಶಿವ ಬೆಳಗಲಿ, ಯುವತಿ ಕಳೆದುಕೊಂಡಿದ್ದ ಬ್ಯಾಗನ್ನ ಸ್ಥಳೀಯ ಕಾನ್ ಸ್ಟೇಬಲ್‍ಗೆ ನೀಡಿದ್ದರು. ಯುವತಿಯ ಫೊನ್ ನಂಬರ್ ಸಿಗದೇ ಪೇದೆ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದರು.

ಮರುದಿನ ಯುವತಿ ಇ-ಲಾಸ್ಟ್ ನಲ್ಲಿ ದೂರು ದಾಖಲಿದ್ದರು. ಈ ಮಾಹಿತಿ ಪಡೆದುಕೊಂಡ ಕೂಡಲೇ ಪೊಲೀಸ್ ಪೇದೆ, ಯುವತಿಗೆ ಕರೆ ಮಾಡಿ ಕಳೆದುಕೊಂಡಿದ್ದ ದಾಖಲಾತಿಗಳನ್ನ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದರು. ಈ ಮೂಲಕ ಯುವತಿ ತನ್ನ ಅಧಿಕೃತ ದಾಖಲೆಗಳನ್ನು ಸಬ್ಮಿಟ್ ಮಾಡಿ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.

ಸಂಪಿಗೆಹಳ್ಳಿ ಠಾಣಾ ಪೊಲೀಸರ ಸಹಾಯಕ್ಕೆ ಕಾಶ್ಮೀರಿ ಯುವತಿ ಧನ್ಯವಾದ ಅರ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *