ಶ್ರೀಗವಿಮಠ ಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ ಕಾರ್ಯಕ್ರಮ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಾತ್ರೆಯ ಸಾಂಪ್ರದಾಯಿಕ ಆಕರ್ಷಣೆಗಳಲ್ಲಿ ಒಂದಾದ ತೆಪ್ಪೋತ್ಸವ ಕಾರ್ಯಕ್ರಮವೂ ಶ್ರೀ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ಜರುಗಿತು.

ಪೂರ್ವದಲ್ಲಿ ಶ್ರೀ ಗವಿಸಿದ್ಧೇಶ್ವರ ಪಲ್ಲಕ್ಕಿಯೂ ಕೆರೆಯ ಭವ್ಯ ವೇದಿಕೆಯಲ್ಲಿ ಆಗಮಿಸಿ ಪ್ರತಿಷ್ಠಾನಗೊಂಡ ನಂತರ ಉತ್ಸವ ಪೂಜೆಯೊಂದಿಗೆ ಆರಂಭವಾಯಿತು. ಈ ವರ್ಷದ ಕಾರ್ಯಕ್ರಮಕ್ಕೆ ಸಂಗೀತ ಸುಧೆಯನ್ನು ಹರಿಸಲು ‘ಸರಿಗಮಪ’ ಖ್ಯಾತಿಯ ಅರ್ಜುನ್ ಇಟಗಿ, ಮಾನ್ಯ ಪಾಟೀಲ, ಸಂಗೀತಾ ಹಾಗೂ ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತ್ತು. ನಂತರ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಂತರ ಸುಮಾರು ವರ್ಷಗಳ ಹಿಂದೆ ಕುಷ್ಠ ರೋಗಕ್ಕೆ ತುತ್ತಾಗಿ ಊರ ಜನರಿಂದ ತಾತ್ಸಾರಕ್ಕೆ ಒಳಗಾಗಿ ಈಶಪ್ಪ ಎಂಬವರು ಊರಿನ ಹೊರಗೆ ಉಳಿದಿದ್ದರು. ಶ್ರೀ ಶಿವಶಾಂತವೀರ ಪೂಜ್ಯರ ಕೃಪಾಕಟಾಕ್ಷದಿಂದ ಗುಣಮುಖನಾಗಿ, ಪ್ರಸ್ತುತ ಯಾವ ರೋಗವು ಇಲ್ಲದೆ ಆರೋಗ್ಯವಾಗಿರುವ ಈಶಪ್ಪ ಮತ್ತು ದಾಕ್ಷಾಯಣಿ ದಂಪತಿ ಪೂಜೆ ಸಲ್ಲಿಸುವುದರ ಮೂಲಕ ತೆಪ್ಪೋತ್ಸವಕ್ಕೆ ಚಾಲನೆಯನ್ನು ನೀಡಿದ್ದು ಈ ವರ್ಷದ ಜಾತ್ರಾ ವಿಶೇಷವಾಗಿತ್ತು.

ಸುಂದರ ವಾತಾವರಣದ ಶುಭ ಸಂಜೆ ಸೂರ್ಯನ ಬಂಗಾರ ಕಿರಣ ನಿರ್ಗಮನ, ಚಂದ್ರನ ಬೆಳ್ಳಿ ಕಿರಣಗಳ ಬೆಳಕಿನ ಆಗಮನದಲ್ಲಿ ನಡೆಯುವ ಈ ಮಹೋತ್ಸವ ಭಕ್ತರನ್ನು ಆನಂದದ ಭಕ್ತಿಯಲ್ಲಿ ತೇಲಾಡಿ ಮಂತ್ರಮುಗ್ಧಗೊಳಿಸಿತ್ತು. ಪ್ರಾಕೃತಿಕ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ಶ್ರೀ ಗವಿಮಠದ ಆವರಣದಲ್ಲಿ ವೈಶಂಪಾಯನ ಸರೋವರದಂತೆ ಕಾಣುವ ಶ್ರೀ ಮಠದ ಕೆರೆಯೂ ನೋಡಲು ಸುಂದರವಾಗಿತ್ತು. ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡ ತೆಪ್ಪವು ದೈವದ ತೊಟ್ಟಿಲಿನಂತೆ ತೇಲುತ್ತಾ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತನ್ನ ಮಡಿಲಲ್ಲಿ ಸ್ವೀಕರಿಸಿ ತೂಗುತ್ತಾ ಭಕ್ತರ ಮನಗಳನ್ನು ತಣಿಸಿತ್ತು. ಸುಗಂಧ ಭರಿತ ಪುಷ್ಪಗಳಿಂದ ಅಲಂಕಾರಗೊಂಡ ತೆಪ್ಪವು ನೋಡಲು ಸುಂದರ ಮನೋಹರವಾಗಿತ್ತು.

ಇನ್ನೂ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಬಳಗಾನೂರ ಚಿಕೇನಕೊಪ್ಪದ ಶ್ರೀ ಶಿವಶರಣರ ಕಂಠದಿಂದ ನಾದಮಯವಾಗಿ ಹೊರಹೊಮ್ಮುವ ಶ್ರೀ ಗವಿಸಿದ್ಧೇಶ್ವರ ಪಾಹಿಮಾಮ್ ಪಾಹಿಮಾಮ್ ಎನ್ನುವ ಸ್ತೋತ್ರ ಕರ್ಣಸ್ಪರ್ಶವಾದಾಗ ಸಾಕ್ಷಾತ್ ಶ್ರೀ ಗವಿಸಿದ್ಧೇಶ್ವರ ಎಲ್ಲ ಭಕ್ತರನ್ನು ಹರಸುತ್ತಿದ್ದಾನೆ ಎಂಬ ಭಾವ ಭಕ್ತರಲ್ಲಿ ಮೂಡಿತ್ತು. ಪರಮಾನಂದ ಭಾವದಿಂದ ನೆರೆದಿದ್ದ ಕೆರೆಯ ಸುತ್ತಮುತ್ತ ಸುಮಾರು 12 ರಿಂದ 15 ಸಾವಿರಕ್ಕಿಂತ ಹೆಚ್ಚು ಭಕ್ತ ಜನಸ್ತೋಮ ತೆಪ್ಪೋತ್ಸವ ವೀಕ್ಷಿಸಿ ಪುನಿತರಾದರು.

Comments

Leave a Reply

Your email address will not be published. Required fields are marked *