ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ

– ನಾಳೆ ಬೆಳಗ್ಗೆ ಹೇಳಿಕೆ ನೀಡುತ್ತೇನೆ – ಟ್ರಂಪ್
– ಯುದ್ಧ ಬಯಸಲ್ಲ, ದಾಳಿ ನಡೆಸಿದ್ರೆ ಹಿಮ್ಮೆಟ್ಟಿಸುತ್ತೇವೆ : ಇರಾನ್

ದುಬೈ: ಅಮೆರಿಕ ಮತ್ತು ಇರಾನ್ ನಡುವಿನ ಕಿತ್ತಾಟ ಮತ್ತಷ್ಟು ಜೋರಾಗಿದೆ. ಇರಾನ್ ಬುಧವಾರ  ಕ್ಷಿಪಣಿ ದಾಳಿ ನಡೆಸಿ ಅಮೆರಿಕದ 80 ಸೈನಿಕರನ್ನು ಹತ್ಯೆ ಮಾಡಿದೆ.

ಈ ಸಂಬಂಧ ಇರಾನ್ ಸರ್ಕಾರಿ ಮಾಧ್ಯಮ, ಖಂಡಾಂತರ ಕ್ಷಿಪಣಿ ದಾಳಿ ಮಾಡಿ ಇರಾಕ್‍ನಲ್ಲಿದ್ದ ಅಮೆರಿಕ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನಮ್ಮ ದಾಳಿಯಲ್ಲಿ 80 ‘ಅಮೆರಿಕ ಉಗ್ರರು’ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

ಇರಾನ್ ಅಮೆರಿಕ ತನ್ನ ವೈರಿ ಎಂದು ಈಗಾಗಲೇ ಹೇಳಿಕೊಂಡಿದ್ದು ಉಗ್ರರ ನಾಡು ಎಂದು ಕರೆಯುತ್ತಿದೆ. ಅಮೆರಿಕದ ಸೈನಿಕರನ್ನು ಉಗ್ರಗಾಮಿಗಳಿಗೆ ಹೋಲಿಕೆ ಮಾಡುತ್ತಿದೆ. ತನ್ನ ಸೇನಾ ಕಮಾಂಡರ್ ಖಾಸಿಂ ಸುಲೇಮಾನಿ ಹತ್ಯೆ ಪ್ರತೀಕಾರ ತೀರಿಸುತ್ತೇವೆ ಎಂದು ಇರಾನ್ ಹೇಳಿತ್ತು. ಅದರಂತೆ ಈಗ ಈ ದಾಳಿ ನಡೆಸಿದ್ದೇವೆ ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ.

ಒಟ್ಟು 15 ಕ್ಷಿಪಣಿಗಳನ್ನು ಇರಾನ್ ಅಮೆರಿಕ ಸೇನೆಯ ಮೇಲೆ ಹಾರಿಸಿದೆ. ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ನಮ್ಮ ಕ್ಷಿಪಣಿಯನ್ನು ಅಮೆರಿಕ ಹೊಡೆದು ಹಾಕಿಲ್ಲ ಎಂದು ಇರಾನ್ ಸರ್ಕಾರಿ ಮಾಧ್ಯಮ ಹೇಳಿಕೊಂಡಿದೆ. ಇದನ್ನೂ ಓದಿ: ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

ಈ ಸಂಬಂಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ ಇರಾಕ್ ದೇಶದಲ್ಲಿರುವ ನಮ್ಮ ಎರಡು ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ. ವಿಶ್ವದಲ್ಲೇ ನಾವು ಬಲಿಷ್ಠವಾದ ಮಿಲಿಟರಿಯನ್ನು ಹೊಂದಿದ್ದು, ನಾಳೆ ಬೆಳಗ್ಗೆ ಹೇಳಿಕೆ ನೀಡುತ್ತೇನೆ ಎಂದು ಟ್ವೀಟ್ ಮಾಡಿ ಮತ್ತೊಂದು ದಾಳಿಯ ಮುನ್ಸೂಚನೆ ನೀಡಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಜಾವದ್ ಜರೀಫ್ ಈ ಸಂಬಂಧ ಪ್ರತಿಕ್ರಿಯಿಸಿ, ವಿಶ್ವಸಂಸ್ಥೆಯ 51ನೇ ಚಾರ್ಟರ್ ಅನ್ವಯ, ನಮ್ಮ ದೇಶದ ಪ್ರಜೆ ಮತ್ತು ಅಧಿಕಾರ ಮೇಲೆ ಹೀನ ದಾಳಿ ನಡೆಸಿದ್ದಕ್ಕೆ ಸ್ವಯಂ ರಕ್ಷಣೆಗಾಗಿ ಪ್ರತಿ ದಾಳಿ ನಡೆಸಲಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ ನಮ್ಮ ಮೇಲೆ ಆಕ್ರಮಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *