ಸಿ.ಕೆ.ನಾಯ್ಡು ಟ್ರೋಫಿ: ಆಂಧ್ರ ಬೌಲರ್‌ಗಳ ದಾಳಿಗೆ ತತ್ತರಿಸಿದ ಕರ್ನಾಟಕ ಆರಂಭಿಕರು

ಬೆಳಗಾವಿ: ಇಲ್ಲಿನ ಕೆಎಸ್‍ಸಿಎ ಸಂಸ್ಥೆಯ ಮೈದಾನದಲ್ಲಿ ಭಾನುವಾರದಿಂದ ಆರಂಭವಾಗಿರುವ ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವಿನ ಸಿ.ಕೆ.ನಾಯ್ಡು ಟ್ರೋಫಿ 23 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದ 2ನೇ ದಿನದಾಟದಲ್ಲಿ ರಾಜ್ಯ ತಂಡ 8 ವಿಕೆಟ್‍ಗಳನ್ನು ಕಳೆದುಕೊಂಡು 238 ರನ್‍ಗಳಿಸಿದೆ. 43 ರನ್‍ಗಳ ಹಿನ್ನಡೆಯೊಂದಿಗೆ ಮೂರನೇ ದಿನದಾಟ ಕಾಯ್ದುಕೊಂಡಿದೆ.

ಕರ್ನಾಟಕ ತಂಡ 13 ರನ್‍ಗಳಿಂದ ಸೋಮವಾರ ತನ್ನ ಮೊದಲ ಇನಿಂಗ್ಸ್ ನ ಮುಂದುವರಿಸಿತು. 2ನೇ ದಿನದಾಟದ ಆರಂಭದಲ್ಲಿ 7 ರನ್‍ಗಳಿಸಿ ಕ್ರೀಸ್‍ನಲ್ಲಿದ್ದ ಆರಂಭಿಕ ಶಿವಕುಮಾರ ಬಿ.ಯು 4 ರನ್ ಗಳಿಸಿ ಎ.ಪ್ರಣಯಕುಮಾರಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬ್ಯಾಟಿಂಗ್‍ಗಿಳಿದ ಎನ್.ಜಯೇಶ್ ಖಾತೆ ತೆರೆಯುವ ಮುನ್ನವೇ ಪಿ.ಪಿ.ಮನೋಹರ್ ಅವರ ಎಸೆತದಲ್ಲಿ ಪೆವಿಲಿಯನ್ ಸೇರಿದರು.

ಮಧ್ಯಾಹ್ನದ ಚಹಾ ವಿರಾಮಕ್ಕೂ ಮುನ್ನ ಪಿ.ಪಿ.ಮೋಹನ ಹಾಗೂ ಎ.ಪ್ರಣಯಕುಮಾರ ದಾಳಿಗೆ ತತ್ತರಿಸಿದ ರಾಜ್ಯ ತಂಡ 57 ಓವರ್ ಗಳಲ್ಲಿ 127 ರನ್‍ಗಳಿಗೆ ತನ್ನ ಪ್ರಮುಖ 6 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಉಪನಾಯಕ, ವಿಕೆಟ್ ಕೀಪರ್ ಸುಜಯ ಸಾತೇರಿ (69 ರನ್) ಹಾಗೂ ಅಂಕಿತ ಉಡುಪ (40 ರನ್) ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. ವಿನಾಯಕ್ ವೈಶಾಖ್ ಜೊತೆಗೆ 9ನೇ ವಿಕೆಟ್‍ಗೆ ಜೊತೆಯಾದ ಅಬ್ದುಲ್ ಹಸನ್ ಖಾಲಿದ್ 63 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 32 ರನ್‍ಗಳಿಸಿ 55 ರನ್‍ಗಳ ಜೊತೆಯಾಟವಾಡಿ ತಂಡದ ಮೊತ್ತ 230 ರನ್ ತನಕ ಹಿಗ್ಗಿಸಿದರು.

ರಾಜ್ಯ ತಂಡದ ಆರಂಭಿಕ ಆಟಗಾರರು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ಜಯ ಸಾತೇರಿ  ತಾಳ್ಮೆಯ ಆಟ ಹಾಗೂ ವಿನಾಯಕ್ ವೈಶಾಖ್ ಬಿರುಸಿನ ಹೊಡೆತಗಳೊಂದಿಗೆ 68 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 40 ರನ್‍ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆಂಧ್ರಪ್ರದೇಶ ತಂಡದ ಪಿ.ಪಿ.ಮೋಹನ 3 ವಿಕೆಟ್, ಎ.ಪ್ರಣಯಕುಮಾರ 2 ವಿಕೆಟ್ ಹಾಗೂ ಗಿರಿನಾಥ್ ರೆಡ್ಡಿ 2 ವಿಕೆಟ್‍ಗಳನ್ನು ಪಡೆದುಕೊಂಡು ರಾಜ್ಯ ತಂಡಕ್ಕೆ ಮಾರಕವಾದರು. ದಿನದಾಟದ ಅಂತ್ಯಕ್ಕೆ ವಿನಾಯಕ್ ವೈಶಾಖ್ 40 ರನ್ ಹಾಗೂ ಅಬ್ದುಲ್ ಹಸನ್ ಖಾಲಿದ 32 ರನ್‍ಗಳಿಸಿ ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸ್ಕೋರ್ ವಿವರ:

ಆಂಧ್ರಪ್ರದೇಶ – ಮೊದಲ ಇನ್ನಿಂಗ್ಸ್ 281 ಆಲೌಟ್
ಕರ್ನಾಟಕ – ಮೊದಲ ಇನಿಂಗ್ಸ್- 238/8
ಅಂಕಿತ ಉಡುಪ- 40 ರನ್
ಸುಜಯ ಸಾತೇರಿ- 69 ರನ್
ವಿನಾಯಕ್ ವೈಶಾಖ್ ಅಜೇಯ- 40 ರನ್
ಅಬ್ದುಲ್ ಹಸನ್ ಖಾಲಿದ ಅಜೇಯ- 32 ರನ್
ಇತರೆ 21 ರನ್ (ಪಿ.ಪಿ.ಮನೋಹರ್ 47 ಕ್ಕೆ 3, ಎ.ಪ್ರಣಯಕುಮಾರ 39ಕ್ಕೆ 2, ಗಿರಿನಾಥ್ ರೆಡ್ಡಿ 47ಕ್ಕೆ 2 ವಿಕೆಟ್)

Comments

Leave a Reply

Your email address will not be published. Required fields are marked *