ಜೆಎನ್‍ಯು ಕ್ಯಾಂಪಸ್‍ನಲ್ಲಿ ಘರ್ಷಣೆ- ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷೆ ಐಶಿ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ

ನವದೆಹಲಿ: ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೆಎನ್‍ಯು ವಿಶ್ವವಿದ್ಯಾಲಯದ ಕ್ಯಾಂಪಸ್ ಪ್ರವೇಶಿಸಿದ ಗುಂಪೊಂದು ವಿದ್ಯಾರ್ಥಿಗಳು ಸೇರಿ ಉಪನ್ಯಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಘಟನೆಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಾಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರತ್ಯೇಕ್ಷದರ್ಶಿಗಳ ಪ್ರಕಾರ, ಕಲ್ಲು ಮತ್ತು ಲಾಠಿ ಹಿಡಿದ ಗುಂಪೊಂದು ಹಾಸ್ಟೆಲ್ ಪ್ರವೇಶಿಸಿತ್ತು. ಈ ವೇಳೆ ಹಾಸ್ಟೇಲ್‍ನಲ್ಲಿದ್ದ ಐಶಿ ಘೋಷ್ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳು ಹೆಚ್ಚಾಗಿ ವಿದ್ಯಾರ್ಥಿಗಳ ತಲೆಗೆ ರಕ್ತಬರುವಂತೆ ಹೊಡೆದಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ಐಶಿ ಘೋಷ್ ಅವರು, ಮಾಸ್ಕ್ ಧರಿಸಿಕೊಂಡ ಬಂದಿದ್ದ ಗುಂಪು ನಮ್ಮ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಫೀ ಹೆಚ್ಚಳ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಾದಿ ತಪ್ಪಿಸಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದು ಘಟನೆ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದಕ್ಕೆ ಪ್ರತ್ಯಾರೋಪ ಮಾಡಿರುವ ಎಬಿವಿಪಿ, ಘಟನೆಯಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ದಾಳಿ ಆಗಿದ್ದು, 25 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಹಿಂದೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕೈವಾಡ ಇದೆ ಎಂದು ಟ್ವೀಟ್ ಮಾಡಿದೆ.

ಸ್ಥಳದಲ್ಲಿ ಸದ್ಯ ಬಿಗುವಿನ ವಾತಾವರಣವಿದ್ದು ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಆಂಬುಲೆನ್ಸ್ ಕಳುಹಿಸಿಕೊಡಲಾಗಿದೆ. ವಿಶ್ವವಿದ್ಯಾಲಯ ಮುಖ್ಯ ಗೇಟ್ ಬಳಿ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಭದ್ರತೆಗೆ ಮನವಿ ಮಾಡಿದ್ದಾರೆ. ಇತ್ತ ಘಟನೆ ಬೆನ್ನಲೆ ಟ್ವಿಟರ್ ನಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *