ಮನೆ, ಮನೆ ಕಡೆ ಬಿಜೆಪಿ ನಾಯಕರ ನಡೆ- ಮೋದಿ ಸೂಚನೆ ಪಾಲನೆಗಿಳಿದ ಸಿಎಂ!

ಬೆಂಗಳೂರು: ಪೌರತ್ವ ಕಾಯ್ದೆ ಬಿಸಿ ಇನ್ನೂ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಜನರ ಬಳಿಗೆ ಪೌರತ್ವ ಜಾಗೃತಿ ಕೊಂಡೊಯ್ಯಲು ನಾನಾ ತಂತ್ರಗಾರಿಕೆ ಮಾಡುತ್ತಿದೆ. ಅದರಲ್ಲಿ ಪೌರತ್ವ ಜಾಗೃತಿ ಅಭಿಯಾನವೂ ಒಂದು. ಬಿಜೆಪಿ ದೇಶದೆಲ್ಲೆಡೆ ಇಂದಿನಿಂದ ಜನವರಿ 20ರ ತನಕ ಪೌರತ್ವ ಅಭಿಯಾನ ಶುರು ಮಾಡಿದೆ. ಇತ್ತೀಚೆಗೆ ಮೋದಿ ರಾಜ್ಯಕ್ಕೆ ಬಂದಾಗ ಪೌರತ್ವ ಅಭಿಯಾನ ಯಶಸ್ವಿಯಾಗಿ ನಡೆಯಬೇಕು ಅಂತ ಯಡಿಯೂರಪ್ಪಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಬೆನ್ನಲ್ಲೇ ಬಿಜೆಪಿ ನಾಯಕರು ಇಂದು ಮನೆ-ಮನೆ ಸಂಚರಿಸಿದ್ರು.

ರಾಜ್ಯ ಬಿಜೆಪಿಯಿಂದ ಪೌರತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆ-ಮನೆ ಸಂಪರ್ಕ ಮಾಡಿದರು. ವಿದ್ಯಾ ಶಂಕರ್ ಅವರ ಮನೆಯಲ್ಲಿ ಪೌರತ್ವ ಅಭಿಯಾನಕ್ಕೆ ಚಾಲನೆ ಕೊಟ್ಟು ಒಟ್ಟು 4 ಮನೆಗಳಿಗೆ ಭೇಟಿ ನೀಡಿ ಪೌರತ್ವ ಜಾಗೃತಿ ಮೂಡಿಸಿದರು. ಬೆಂಗಳೂರಿನ ಹಲವು ಕಡೆಗಳಲ್ಲಿ ಸಂಪರ್ಕ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರು ದಕ್ಷಿಣದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಬೆಂಗಳೂರು ಉತ್ತರದಲ್ಲಿ ಕೇಂದ್ರ ಮಂತ್ರಿ ಸದಾನಂದಗೌಡ ನೇತೃತ್ವದಲ್ಲಿ ಅಭಿಯಾನ ಆರಂಭವಾಯ್ತು.

ಅಂದಹಾಗೆ ಇಂದಿನಿಂದ ಜನವರಿ 20ರ ತನಕ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ ಮೂವತ್ತು ಲಕ್ಷ ಮನೆಗೆ ಭೇಟಿ ನೀಡಲಿದ್ದು, ಪ್ರತಿ ಬೂತ್ ನಲ್ಲಿ 50 ಮನೆಗಳಿಗೆ ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಒಬ್ಬರಿಂದ ಒಬ್ಬರಿಗೆ ಹೇಳುವ ಮೂಲಕ ದೇಶದ ಎಲ್ಲಾ ಜನತೆಗೆ ಪೌರತ್ವ ಅಭಿಯಾನ ಮೂಡಿಸುವ ಪ್ರಯತ್ನ ಇದಾಗಿದೆ. ಈ ನಡುವೆ ನಾಲ್ಕು ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಸಿಂಧನೂರು ಸಮಾವೇಶ ನಡೆಯಲಿವೆ. ನಾಲ್ಕು ಬೃಹತ್ ಸಮಾವೇಶಕ್ಕೆ ಕೇಂದ್ರ ನಾಯಕರು ಆಗಮಿಸಲಿದ್ದಾರೆ. ರಾಜ್ಯದಿಂದ ದೆಹಲಿಗೆ ತೆರಳುವ ಮುನ್ನ ಪೌರತ್ವ ಅಭಿಯಾನದ ಬಗ್ಗೆ ವಿಚಾರಿಸಿರುವ ಪ್ರಧಾನಿ, ಅಭಿಯಾನ ಯಶಸ್ವಿಗೊಳಿಸಲು ಯಡಿಯೂರಪ್ಪಗೆ ಖಡಕ್ ಸೂಚನೆ ನೀಡಿದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಅಭಿಯಾನ ಯಶಸ್ವಿಗೊಳಿಸಲು ಸಿಎಂ ಯಡಿಯೂರಪ್ಪ ಸಹಿತ ಎಲ್ಲ ಬಿಜೆಪಿ ನಾಯಕರು ‘ಮನೆ ಕಡೆ ನಮ್ ನಡೆ’ ಅಂತ ಅಭಿಯಾನ ಶುರು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *