– ಹೂಡಿಕೆದಾರರನ್ನ ರಾಮನಗರದತ್ತ ಸೆಳೆಯಲು ಬಿಜೆಪಿ ಪ್ಲ್ಯಾನ್
– ಮರುನಾಮಕರಣದ ಬಗ್ಗೆ ಬಿಜೆಪಿ ನಾಯಕರಿಂದ ಸಿಎಂ ಬಳಿ ಪ್ರಸ್ತಾಪ
ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯನ್ನು ಇದೀಗ ನವ ಬೆಂಗಳೂರು ಎಂದು ಮರುನಾಮಕರಣ ಮಾಡುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸದ್ದಿಲ್ಲದೇ ಈ ಚರ್ಚೆ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಂಗಳಕ್ಕೆ ಕಾಲಿಟ್ಟಿದ್ದು, ಪ್ರಾರಂಭಿಕ ಹಂತದಲ್ಲಿ ಚರ್ಚೆಯನ್ನ ನಡೆಸಲಾಗಿದೆ.
ಮರುನಾಮಕರಣ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರ ಬಳಿ ಬಿಜೆಪಿ ನಾಯಕರೇ ಇಂತಹದೊಂದು ಪ್ರಸ್ತಾಪನ್ನಿಟ್ಟಿದ್ದಾರೆ. ರಾಮನಗರದ ಸಮಗ್ರ ಅಭಿವೃದ್ಧಿಯ ಜೊತೆಗೆ ಐಟಿ-ಬಿಟಿ ಹಾಗೂ ಹೂಡಿಕೆದಾರರನ್ನು ಜಿಲ್ಲೆಯತ್ತ ಸೆಳೆಯುವುದರ ಮೂಲಕ ಇಂಡಸ್ಟ್ರಿಯಲ್ ಹಬ್ ಸೃಷ್ಟಿಸುವುದು ಮರುನಾಮಕರಣದ ಉದ್ದೇಶ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ರಾಮನಗರ ಜಿಲ್ಲೆ ಇದೀಗ ಮರುನಾಮಕರಣವಾಗಲಿದೆ ಎನ್ನುವ ಚರ್ಚೆ ಗುಸುಗುಸು ಇದೀಗ ಜಿಲ್ಲೆ ಅಲ್ಲದೇ ರಾಜ್ಯ ಸರ್ಕಾರದ ಮಟ್ಟದಲ್ಲೂ ಹರಿದಾಡುತ್ತಿದೆ. ಅಂದಹಾಗೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಂಥದೊಂದು ಚರ್ಚೆಗೆ ಕಾರಣವಾಗಿದೆ. ಮರುನಾಮಕರಣದ ವಿಚಾರ ಇದೀಗ ಸರ್ಕಾರದ ಮಟ್ಟದಲ್ಲಿ ಪ್ರಾರಂಭಿಕ ಹಂತದಲ್ಲಿದೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿ ಕೆಲವು ಬಿಜೆಪಿ ಮುಖಂಡರು ಪ್ರಸ್ತಾಪ ಮಾಡಿದ್ದಾರೆ.
ನವ ದೆಹಲಿ, ನವ ಮುಂಬೈ ರೀತಿ ನವ ಬೆಂಗಳೂರು ಸೃಷ್ಟಿಸುವುದು, ಆ ಮೂಲಕ ಬೆಂಗಳೂರಿನ ಮೇಲಿರುವ ಭಾರವನ್ನ ಇಳಿಸುವುದು ಮುಖ್ಯ ಉದ್ದೇಶವಾಗಿದೆ. ಇತ್ತ ಬಿಜೆಪಿ ಮುಖಂಡರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೂ ಸದ್ಯಕ್ಕೆ ಪ್ರಾರಂಭಿಕ ಹಂತದಲ್ಲೇ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಮನಗರ ಹೆಸರಿನ ವಿಚಾರವಾಗಿ ಕಳೆದ ಡಿಸೆಂಬರ್ 25ರಂದು ಮಾತನಾಡಿದ್ದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆ ಮಾಡಿ ಒಂದು ತಪ್ಪು ಮಾಡಿಬಿಟ್ಟರು. ಅದು ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ತಪ್ಪಲ್ಲ. ಆದರೆ ರಾಮನಗರ ಎಂದು ಹೆಸರಿಟ್ಟಿದ್ದು ತಪ್ಪು. ಬೆಂಗಳೂರು ದಕ್ಷಿಣ ಅಂತ ಹೆಸರಿಡಬೇಕಿತ್ತು. ನಾವು ಬೆಂಗಳೂರಿನವರೇ ಬೆಂಗಳೂರು ಗ್ರಾಮಾಂತರದಲ್ಲಿದ್ದವರು. ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದರೆ ರೈತರ ಭೂಮಿಯ ಬೆಲೆಯೂ ಸಹ ಹೆಚ್ಚಾಗುತ್ತಿತ್ತು ಎಂದು ಹೇಳಿದ್ದರು.

ಅಂದಹಾಗೇ ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ಹೂಡಿಕೆದಾರರಿಗೆ ಜಾಗವೇ ಸಿಗದಂತಾಗುತ್ತಿದೆ. ಹೂಡಿಕೆಗೆ ಮುಂದಾದರೂ ಜಾಗ ಸಿಗದೇ ಹೂಡಿಕೆದಾರರು ಬೇರೆಡೆ ಮುಖ ಮಾಡುವಂತಾಗಿದೆ. ಇತ್ತ ರಾಮನಗರ ಅಂದ್ರೆ ಹೂಡಿಕೆದಾರರಲ್ಲಿ ಬೇರೆ ಜಿಲ್ಲೆ ಎಂಬ ಮನೋಭಾವವಿದ್ದು, ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ರಾಮನಗರವನ್ನ ನವ ಬೆಂಗಳೂರು ಅಂತ ಮರುನಾಮಕರಣ ಮಾಡಿದರೆ ಬೆಂಗಳೂರು ಮಾದರಿಯಲ್ಲೇ ಐಟಿ-ಬಿಟಿ ಹಾಗೂ ಇಂಡಸ್ಟ್ರಿಯಲ್ ಹಬ್ ಸೃಷ್ಟಿಯಾಗಲಿದೆ. ವಿದೇಶಗಳಿಂದ ಕೋಟ್ಯಾಂತರ ರೂಪಾಯಿಗಳ ಹೂಡಿಕೆಯಾಗಲಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ರೈತರ ಭೂಮಿಗೆ ಚಿನ್ನದ ಬೆಲೆ ಕೂಡ ಸಿಗುವುದಲ್ಲದೇ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ. ಹೀಗಾಗಿ ರಾಮನಗರ ಜಿಲ್ಲೆಗೆ ನವ ಬೆಂಗಳೂರು ಎಂದು ಮರುನಾಮಕರಣ ಮಾಡಲು ಚಿಂತನೆಗಳು ಜೋರಾಗಿಯೇ ಚರ್ಚೆಯಾಗುತ್ತಿದೆ.
ರಾಮನಗರ ಸೇರಿದಂತೆ ಐದು ತಾಲೂಕುಗಳನ್ನು ನವ ಬೆಂಗಳೂರಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ ತಾಲೂಕುಗಳನ್ನು ಸೇರಿಸಿಕೊಳ್ಳಬೇಕೋ ಬೇಡವೋ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.

Leave a Reply