ವಿದೇಶದಿಂದ ಮಂಗ್ಳೂರು ಗಲಭೆಗೆ ಪ್ರಚೋದಿಸಿದವರ ಪಾಸ್‍ಪೋರ್ಟ್ ರದ್ದು

– ಕಠಿಣ ಕ್ರಮಕ್ಕೆ ಮುಂದಾದ ಮಂಗಳೂರು ಪೊಲೀಸರು

ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೆ ಅತ್ತ ವಿದೇಶದಲ್ಲಿರುವ ಭಾರತೀಯ ಮುಸ್ಲಿಂ ಯುವಕರು ಪ್ರಚೋದನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ವಿದೇಶದಲ್ಲಿರುವುದರಿಂದ ತಾವೇನು ಬೇಕಾದರೂ ಸಾಮಾಜಿಕ ಜಾಲತಾಣದಲ್ಲಿ ಬರೆಯಬಹುದು ಅದರಿಂದ ತಮಗೇನು ಆಗುವುದಿಲ್ಲ ಎಂದುಕೊಂಡವರಿಗೆ ಇದೀಗ ಬಿಗ್ ಶಾಕ್ ಹೊಡೆದಿದೆ.

ಹೌದು. ವಿದೇಶದಲ್ಲಿದ್ದುಕೊಂಡು ಗಲಭೆ, ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮಂಗಳೂರಿನ ಪೊಲೀಸರು ಮುಂದಾಗಿದ್ದಾರೆ. ಡಿಸೆಂಬರ್ 19ರ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೂ ಮುನ್ನ ಮತ್ತು ಆನಂತರ ಪೊಲೀಸರ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುವ ಮೆಸೇಜ್, ವಾಯ್ಸ್ ಮೆಸೇಜ್‍ಗಳನ್ನು ಹರಿಯ ಬಿಡಲಾಗಿತ್ತು. ಜೊತೆಗೆ ಕೋಮು ದ್ವೇಷವನ್ನು ಹರಡುವ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು. ಹೀಗೆ ಸಂದೇಶ ಕಳಿಸಿದವರಲ್ಲಿ 50ಕ್ಕೂ ಹೆಚ್ಚಿನ ಮಂದಿ ವಿದೇಶದಲ್ಲಿರುವ ಮಾಹಿತಿ ತಿಳಿದುಬಂದಿದ್ದು ಪೊಲೀಸರು ಅಂಥ ಆರೋಪಿಗಳ ಪಾಸ್ ಪೋರ್ಟ್ ರದ್ದುಪಡಿಸಲು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಸಿಎಎ ವಿರೋಧಿಸಿ ಮಂಗ್ಳೂರಿನಲ್ಲಿ ಜ.4ರಂದು ನಿಗದಿಯಾಗಿದ್ದ ಪ್ರತಿಭಟನೆ ರದ್ದು

ಈ ನಿಟ್ಟಿನಲ್ಲಿ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದು, ಲೆಟರ್ಸ್ ರೊಗೇಟರಿ ಎನ್ನುವ ವಿಧಾನದ ಮೂಲಕ ವಿದೇಶದಲ್ಲಿ ಉದ್ಯೋಗದಲ್ಲಿರುವ ಮಂದಿಯ ಪಾಸ್‍ಪೋರ್ಟ್ ರದ್ದುಪಡಿಸಲು ತಯಾರಿ ನಡೆಸಿದ್ದಾರೆ. ಮೂಲತಃ ಕರಾವಳಿಯವರಾಗಿದ್ದು ವಿದೇಶದಲ್ಲಿದ್ದು ಇಲ್ಲಿನ ಯುವಕರನ್ನು ಹಿಂಸೆಗೆ ಪ್ರೇರಿಸುವಂಥ ಸಂದೇಶ ರವಾನಿಸುತ್ತಾ ಸಮಾಜದ ಅಶಾಂತಿಗೆ ಕಾರಣವಾಗಿದ್ದರು. ಅಂಥವರ ಮಾಹಿತಿ ಪತ್ತೆ ಮಾಡಲಾಗುತ್ತಿದ್ದು ಜಿಲ್ಲಾ ಕೋರ್ಟ್ ಮೂಲಕ ಆರೋಪ ಸಾಬೀತು ಪಡಿಸಿ ಪಾಸ್‍ಪೋರ್ಟ್, ವೀಸಾ ರದ್ದುಪಡಿಸಲು ಆಯಾ ದೇಶಗಳ ರಾಯಭಾರ ಕಚೇರಿಗಳಿಗೆ ಆದೇಶ ತರಲಾಗುತ್ತದೆ. ಪೊಲೀಸರು ಈ ಕ್ರಮ ಅನುಸರಿಸಿದಲ್ಲಿ ವಿದೇಶದಲ್ಲಿದ್ದು ಆಟಾಟೋಪ ನಡೆಸುತ್ತಿರುವವರ ಆಟ ಇನ್ನು ಬಂದ್ ಆಗಲಿದೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *