ಕಾಮಗಾರಿ ನಡೆಯುವುದಕ್ಕೂ ಮುನ್ನವೇ ಹಣ ಬಿಡುಗಡೆ

– ನೀರಿನಲ್ಲಿ ಕೊಚ್ಚಿ ಹೋಯ್ತು 22 ಲಕ್ಷ ರೂ.

ಮಡಿಕೇರಿ: ಕಾಮಗಾರಿ ಮುಗಿದ ಮೇಲೆ ಹಣ ಬಿಡುಗಡೆ ಸಹಜ. ಆದರೆ ಇಲ್ಲಿ ಮಾತ್ರ ಕಾಮಗಾರಿ ನಡೆಯುವುದಕ್ಕೂ ಮುನ್ನವೇ ಹಣ ಬಿಡುಗಡೆ ಮಾಡುವ ಮೂಲಕ ಅವ್ಯವಹಾರ ನಡೆಸಿರುವುದು ಬಯಲಾಗಿದೆ. ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್ ಲೈನ್ ಅಳವಡಿಸುವುದಕ್ಕೆ ಪಂಚಾಯ್ತಿ ಅನುದಾನದಿಂದ 22 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಪಂಚಾಯ್ತಿ ಮಾತ್ರ ವರಸೆ ಬದಲಾಯಿಸಿದೆ.

ಕೊಡಗು ಜಿಲ್ಲೆಯಲ್ಲಿ ಕಾವೇರಿ ಹುಟ್ಟಿ ಹರಿಯುತ್ತಾಳೆ ಆದರೂ ಇಂದಿಗೂ ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿಯೇ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾಂಧಿನಗರದ ಪರಿಶಿಷ್ಟ ಜಾತಿ ವಾರ್ಡ್‍ಗೆ ಉಪ್ಪುಗುಂಡಿ ಬಳಿಯ ಕಾವೇರಿ ಹೊಳೆಯಿಂದ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿ, ನೀರಿನ ಟ್ಯಾಂಕ್ ನಿರ್ಮಾಣಕ್ಕೆ 2018-19 ಸಾಲಿನ ಪಂಚಾಯ್ತಿ ನಿಧಿಯ ಅನುಮೋದಿತ ಕ್ರಿಯಾ ಯೋಜನೆ ಅಡಿ 22 ಲಕ್ಷ ರೂ. ಮಂಜೂರು ಮಾಡಲಾಗಿತ್ತು.

ಕಾಮಗಾರಿ ಜವಾಬ್ದಾರಿಯನ್ನು ಹುಣುಸೂರಿನ ಕೆಆರ್‍ಐಡಿಎಲ್ ಸಂಸ್ಥೆಗೆ ನೀಡಲಾಗಿತ್ತು. ಆದರೆ ಸಂಸ್ಥೆಯೂ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಯೇ ಇಲ್ಲ. ಬದಲಾಗಿ, ಹಳೆ ಟ್ಯಾಂಕ್‍ಗೆ ಪೈಪ್‍ಗಳನ್ನು ಜೋಡಿಸಿದೆ. ಕಾವೇರಿ ನದಿಯಿಂದ ನೀರು ಲಿಫ್ಟ್ ಮಾಡಲು 30 ಹೆಚ್‍ಪಿ ಮೋಟರ್ ಮತ್ತು 4 ಇಂಚಿನ ಪೈಪ್ ಅಳವಡಿಸಲು ಪ್ಲಾನ್ ಮಾಡಲಾಗಿದೆ. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿ ಕಡಿಮೆ ಇಂಚಿನ ಪೈಪ್ ಅಳವಡಿಸಿರುವುದರಿಂದ ಇದೀಗ ಪೈಪ್‍ಗಳು ಹೊಡೆದು ಹೋಗಿವೆ.

ಇಷ್ಟೆಲ್ಲಾ ಸಮಸ್ಯೆಗಳಿದರೂ ಡಿ. 26, 2018ರಂದು 10 ಲಕ್ಷ ಮತ್ತು ಮಾರ್ಚ್ 6, 2019ರಂದು ಎರಡನೇ ಕಂತಿನಲ್ಲಿ 12 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಸಲ್ಲಿಕೆಯಾಗುವುದಕ್ಕೂ ಮೊದಲೇ ಹಣ ಬಿಡುಗಡೆ ಮಾಡಿರುವ ಪಂಚಾಯ್ತಿ ನಡೆ ಬಗ್ಗೆ ಸಂಶಯ ಮೂಡಿಸಿದೆ. ಈ ಕುರಿತು ಜಿಲ್ಲಾ ಪಂಚಾಯ್ತಿಗೆ ದೂರು ನೀಡಲಾಗಿದೆ.

Comments

Leave a Reply

Your email address will not be published. Required fields are marked *