‘ ಬಿಡ್ಬಾರ್ದು ಅಂದ್ರೆ ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

ತುಮಕೂರು: ಸಿದ್ದಗಂಗಾ ಮಠದೊಳಗೆ ವಸತಿ ಸಚಿವ ಸೋಮಣ್ಣ ಅವರ ಕಾರನ್ನು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಅನೂಪ್ ಶೆಟ್ಟಿ ಗರಂ ಆಗಿದ್ದಾರೆ.

ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್‍ಪಿ ರೇಗಾಡಿದ್ದಾರೆ. ಮಠದ ಎರಡನೇ ಗೇಟ್‍ನಲ್ಲಿ ಎಸ್‍ಪಿ ಅವರು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.”ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಡೋಕೆ ಬರುತ್ತೀರಾ ಇಲ್ಲಿ” ಎಂದು ಬೈದಿದ್ದಾರೆ. ಇದನ್ನೂ ಓದಿ: ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

“ಮೂರು ದಿನದಿಂದ ಏನು ಕಸ ಗುಡಿಸುತ್ತೀದ್ದೇವಾ ನಾವು ಇಲ್ಲಿ. ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? ಅರ್ಥ ಮಾಡಿಕೊಳ್ಳಿ ನಿಮ್ಮ ಯೊಗ್ಯತೆ ಇದ್ದರೆ. ನಮ್ಮನ್ಯಾಕೆ ಕರೆಸುತ್ತೀರಾ. ನಮಗೆ ಮಾಡೋಕೆ ಕೆಲಸವಿಲ್ವಾ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಯಾವ ಗಾಡಿ ಬರುತ್ತೆ ಒಳಗೆ” ಎಂದು ಪ್ರಶ್ನಿಸಿ ಸಚಿವ ಸೋಮಣ್ಣ ಅವರ ಕಾರು ಮಠದ ಒಳಗೆ ಬಿಟ್ಟ ಸಿಬ್ಬಂದಿಗೆ ಎಸ್‍ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಜೊತೆಗೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ನಗರದ ಜೂನಿಯರ್ ಕಾಲೇಜು ಮೈದಾನ ಹಾಗೂ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಸ್ವಾಗತಕ್ಕೆ ಅಣಿಯಾಗಿದೆ. ಭದ್ರತೆಯ ಹಿನ್ನೆಲೆಯಲ್ಲಿ ಮಠದ ಒಳಗೆ ಯಾವುದೇ ವಾಹನಗಳನ್ನು ಬಿಡಬೇಡಿ ಎಂದು ಸಿಬ್ಬಂದಿಗೆ ಎಸ್‍ಪಿ ಸೂಚಿಸಿದ್ದರು. ಆದರೆ ಅವರ ಸೂಚನೆ ಮೀರಿ ಸಿಬ್ಬಂದಿ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದ್ದಕ್ಕೆ ಎಸ್‍ಪಿ ಅನೂಪ್ ಶೆಟ್ಟಿ ಗರಂ ಆಗಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *