ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

– ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ತಡೆ ಹಿಡಿದ ಬಿಜೆಪಿ

ಮಂಗಳೂರು: ಕರ್ನಾಟಕ-ಕೇರಳದ ಗಡಿಭಾಗದಲ್ಲಿರುವ ತಲಪಾಡಿ ಟೋಲ್ ಗೇಟ್‍ನಲ್ಲಿ ಬುಧವಾರ ಟೋಲ್ ಸಂಗ್ರಹ ಸ್ಥಗಿತವಾಗಿದ್ದು, ಜನ ಒಂದು ದಿನದ ಮಟ್ಟಿಗೆ ಟೋಲ್ ಫ್ರೀ ಸಂಚಾರ ಮಾಡಿ ಖುಷಿ ಪಟ್ಟರು. ಈ ಟೋಲ್ ಸಂಗ್ರಹ ಇಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳಲು ಕಾರಣವಾಗಿದ್ದೂ ಅದೇ ಪಂಪ್‍ವೆಲ್ ಫೈಓವರ್ ಎನ್ನುವುದು ಒಂದು ವಿಶಿಷ್ಟ ಸುದ್ದಿ.

ಹತ್ತು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿರುವ ಪಂಪ್‍ವೆಲ್ ಫ್ಲೈ ಓವರ್ ಇನ್ನೂ ಪೂರ್ಣಗೊಳ್ಳದಿರಲು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೂ ಸಂಸದ ನಳಿನ್ ಕುಮಾರ್ ಅವರು ಮಾತ್ರ ಅಧಿಕಾರಿಗಳ ತಲೆ ಮೇಲೆ ಹಾಕಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಂಪ್‍ವೆಲ್ ಫೈಓವರ್ ಬಳಿ ಭೇಟಿ ನೀಡಿದ್ದ ನಳಿನ್ ಕುಮಾರ್ ಕಟೀಲ್ ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಜನವರಿ 1ರಂದು ಫೈಓವರ್ ಉದ್ಘಾಟನೆ ಎಂದಿದ್ದರು. ಆದರೆ ಇನ್ನೂ ಕಾಮಗಾರಿ ಮುಗಿಯದಿದ್ದ ಕಾರಣ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವಾಗ ಪೂರ್ಣಗೊಳ್ಳುತ್ತೆ ಎಂದು ಸ್ಪಷ್ಟನೆ ಕೇಳಿದ್ದರು. ಇದನ್ನೂ ಓದಿ: ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್

ಅಧಿಕಾರಿಗಳು ಇನ್ನೂ ಕೆಲ ತಿಂಗಳ ಸಮಯ ಕೇಳಿರುವುದರಿಂದ ಒಂದು ತಿಂಗಳ ಒಳಗೆ ಪೂರ್ಣಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಗಡುವು ನೀಡಿದ್ದಾರೆ. ಜೊತೆಗೆ ಆ ಒಂದು ತಿಂಗಳ ಕಾಲ ಈ ಹೈವೇಲಿ ಸಿಗುವ ತಲಪಾಡಿ ಟೋಲ್ ಗೇಟ್‍ನಲ್ಲಿ ಯಾವುದೇ ವಾಹನಗಳಿಂದಲೂ ಟೋಲ್ ಶುಲ್ಕ ಸಂಗ್ರಹಿಸಬಾರದು ಎಂದು ಟೋಲ್ ಗುತ್ತಿಗೆ ಪಡೆದಿರುವ ನವಯುಗ್ ಕಂಪನಿಯ ಸಿಬ್ಬಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಸೂಚಿಸದ್ದರು. ಆದರೆ ಇಂದು ಮುಂಜಾನೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿದ್ದನ್ನು ತಿಳಿದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಬಿಜೆಪಿ ಕಾರ್ಯಕರ್ತರೊಂದಿಗೆ ತಲಪಾಡಿ ಟೋಲ್ ಗೇಟ್‍ಗೆ ಧಾವಿಸಿದರು. ಬಳಿಕ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಸಾಂಕೇತಿಕವಾಗಿ ಇಂದು ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ಮಾಡದಂತೆ ಕೇಳಿಕೊಂಡರು.

ಈ ವೇಳೆ ವಾಗ್ದಾದ ನಡೆದು ಬಳಿಕ ಒಂದು ದಿನ ಟೋಲ್ ಸಂಗ್ರಹ ಸ್ಥಗಿತಕ್ಕೆ ಟೋಲ್ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ಸಂಸದರ ಸೂಚನೆ ಇರೋದು ಪಂಪ್‍ವೆಲ್ ಫೈಓವರ್ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕೆಂದು. ನಾಳೆಯಿಂದ ಮತ್ತೆ ಎಂದಿನಂತೆ ಟೋಲ್ ಸಂಗ್ರಹ ಇರುವುದರಿಂದ ಸಂಸದರು ಈ ಮಾತನ್ನೂ ಉಳಿಸಿಕೊಳ್ಳೋದಿಲ್ಲ ಅನ್ನೋದು ಗ್ಯಾರಂಟಿಯಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *