ಕನ್ನಡ ಬಾವುಟ ತೆಗೆಯಿರಿ ಎಂದ ತಮಿಳರು- ಪ್ರಾಣ ಹೋದರು ತೆಗೆಯಲ್ಲ ಎಂದ ಕನ್ನಡಿಗರು

ಮೈಸೂರು: ಮೈಸೂರು ಮತ್ತು ಚಾಮರಾಜನಗರದ ಕೆಲ ಯುವಕರು ತಮಿಳಿಗರ ದಾದಾಗಿರಿಗೆ ಅವರ ನೆಲದಲ್ಲೇ ನಿಂತು, ಅವರದ್ದೇ ಭಾಷೆಯಲ್ಲಿ ತಕ್ಕ ಉತ್ತರ ಕೊಟ್ಟು ಬಂದಿದ್ದಾರೆ.

ತಮಿಳುನಾಡು ಪ್ರವಾಸಕ್ಕೆ ಹೋಗುವ ಕರ್ನಾಟಕದ ವಾಹನಗಳ ಮೇಲೆ ಕನ್ನಡ ಬಾವುಟ ಇರೋದು ಕಂಡರೆ ಸಾಕು ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿ ಬಾವುಟ ಬಿಚ್ಚಿಸುವ ಪುಂಡಾಟಿಕೆ ತಮಿಳುನಾಡಿನಲ್ಲಿ ಜೋರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸದ್ಯ ವಿಡಿಯೋವೊಂದು ಲಭ್ಯವಾಗಿದೆ. ವಾಹನದ ಮೇಲಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ಒತ್ತಾಯ ಮಾಡಿವರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮೈಸೂರು ಮತ್ತು ಚಾಮರಾಜನಗರದ ಕೆಲ ಯುವಕರು ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಕೊಯಮತ್ತೂರಿನಲ್ಲಿ ಬೈಕ್‍ನಲ್ಲಿ ಬಂದ ಸ್ಥಳೀಯ ಯುವಕರು ಕಾರನ್ನು ಅಡ್ಡಗಟ್ಟಿದ್ದಾರೆ. ಆ ಬಳಿಕ ಕಾರಿನ ಮುಂಭಾಗ ಕಟ್ಟಿದ್ದ ಕನ್ನಡ ಬಾವುಟ ತೆಗೆಯುವಂತೆ ಗಲಾಟೆ ಮಾಡಿದ್ದಾರೆ.

ತಮಿಳರ ಈ ವರ್ತನೆಗೆ ಅವರದ್ದೇ ಶೈಲಿಯಲ್ಲಿ ಉತ್ತರ ಕೊಟ್ಟಿರುವ ಕರ್ನಾಟಕ ಯುವಕರು, ಯಾವುದೇ ಕಾರಣಕ್ಕೂ ಬಾವುಟವನ್ನು ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಪಟ್ಟು ಹಿಡಿದ ತಮಿಳಿನ ಯುವಕರು ತೆಗೆಯಲೇ ಬೇಕು ಎಂದು ಮಾತಿನ ಚಕಮಕಿ ನಡೆಸಿದ್ದಾರೆ.

ಕನ್ನಡ ಬಾವುಟ ಯಾವುದೇ ಕಾರಣಕ್ಕೆ ತೆಗೆಯುವುದಿಲ್ಲ ಎಂದು ತಮಿಳಿನಲ್ಲೇ ಎಚ್ಚರಿಸಿದ ಕನ್ನಡದ ಯುವಕರು, ಇಲ್ಲಿ ಬಾವುಟ ತೆಗೆಸಿದರೆ ಕರ್ನಾಟಕದಲ್ಲಿ ಬೇರೆ ಘಟನೆ ನಡೆಯುತ್ತದೆ. ನಮ್ಮ ಪ್ರಾಣ ಹೋದರು ಬಾವುಟ ತೆಗೆಯುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಯಾವಾಗ ಕನ್ನಡಿಗ ಯುವಕರ ಪಟ್ಟು ಬಿಗಿಯಾಯಿತೋ ಆಗ ತಮಿಳು ಯುವಕರು ಅಲ್ಲಿಂದ ಮರು ಮಾತನಾಡದೆ ತೆರಳಿದ್ದಾರೆ.

Comments

Leave a Reply

Your email address will not be published. Required fields are marked *