ಕಾಮುಕರನ್ನು ಒದ್ದು ಜೈಲಿಗೆ ಹಾಕಿ: ಪ್ರಮೋದ್ ಮುತಾಲಿಕ್

ಬೆಳಗಾವಿ/ಚಿಕ್ಕೋಡಿ: ಹೊಸ ವರ್ಷದ ಆಚರಣೆಯಲ್ಲಿ ಅಟ್ಟಹಾಸ ಮೆರೆದ ಕಾಮುಕರನ್ನು ತಕ್ಷಣವೇ ಒದ್ದು ಜೈಲಿಗೆ ಹಾಕಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂಥ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ಕೊಟ್ಟಿದ್ದೇ ತಪ್ಪು. ಹೊಸ ವರ್ಷದ ಆಚರಣೆ ಕುಡುಕರ ಆಚರಣೆ ಆಗಿದೆ. ಸರ್ಕಾರವೇ ಇಂಥ ಕಾಮುಕರಿಗೆ ಕುಡುಕರಿಗೆ ಡ್ರಗಿಸ್ಟ್ ಗಳಿಗೆ ಅವಕಾಶ ಕೊಟ್ಟು ಈ ರೀತಿ ಗಲಾಟೆ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ. ಇಂತಹ ಅವಾಂತರಗಳಿಗೆ ಸರ್ಕಾರ ನೇರ ಕಾರಣ ಎಂದು ಕಿಡಿ ಕಾರಿದರು.

ನಮ್ಮ ದೇಶದಲ್ಲಿ ಹೊಸ ವರ್ಷ ಯುಗಾದಿ ದಿನ. ನಿನ್ನೆ ಮಾಡಿದ್ದ ಹೊಸ ವರ್ಷಾಚರಣೆ ಅವೈಜ್ಞಾನಿಕ. ಹೊಸ ವರ್ಷ ಆಚರಣೆ ಈಗ ಬೂಟಾಟಿಕೆ ಆಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಹೊಸ ವರ್ಷಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ಆಚರಣೆಗೆ ಅವಕಾಶ ಕೊಡಬಾರದು. ಇಂಥ ಕಾರ್ಯಕ್ರಮಗಳು ನಿಂತರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂದರು.

ಬೇಕಾದರೆ ಅವರವರ ಮನೆಯಲ್ಲಿ ಆಚರಿಸ್ಕೊಳ್ಳುತ್ತಾರೆ. ಈ ರೀತಿ ರಸ್ತೆಗಳ ಮೇಲೆ ಆಚರಣೆ ಮಾಡಲು ಅವಕಾಶ ಕೊಡಬಾರದು. ತಕ್ಷಣವೇ ಕಾಮುಕರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *