ಗೆಳತಿ ಮುಂದೆ ಪಿಸ್ತೂಲ್ ಪ್ರದರ್ಶಿಸಲು ಹೋಗಿ ತನಗೆ ತಾನೇ ಶೂಟ್ ಮಾಡ್ಕೊಂಡ

ನವದೆಹಲಿ: ಗೆಳತಿ ಮುಂದೆ ತನ್ನ ಬಳಿಯಿದ್ದ ಪಿಸ್ತೂಲ್ ಪ್ರದರ್ಶಿಸಲು ಹೋಗಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ತನಗೆ ತಾನೇ ಗುಂಡು ಹೊಡೆದುಕೊಂಡ ಘಟನೆ ದೆಹಲಿಯ ತಿಲಕ್ ನಗರದ ಪಾರ್ಕ್‍ನಲ್ಲಿ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಸತ್ಯಾಂಶ ಬೆಳಕಿಗೆ ಬಂದಿದೆ. ಕಕ್ರೋಲಾ ನಿವಾಸಿ ಸೋನು ಶರ್ಮಾ ಗುಂಡು ಹೊಡೆದುಕೊಂಡ ವ್ಯಕ್ತಿ. ಶುಕ್ರವಾರ ರಾತ್ರಿ 11:45ರ ವೇಳೆಗೆ ಈ ಘಟನೆ ನಡೆದಿತ್ತು. ಆ ಬಳಿಕ ಶರ್ಮಾನನ್ನು ಆತನ ಗೆಳತಿ ಮೇಘಾ, ದೀನ ದಯಾಳ್ ಉಪಧ್ಯಾಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಳು. ಆದರೆ ಘಟನೆ ಬಗ್ಗೆ ಪೊಲೀಸ್ ಪ್ರಕರಣ ದಾಖಲಾದಾಗ ವಿಚಾರಣೆ ವೇಳೆ ಶರ್ಮಾ ನನ್ನ ಮೇಲೆ ಯಾರೋ ಗುಂಡು ಹಾರಿಸಿ ಕೊಲೆಗೈಯಲು ಪ್ರಯತ್ನಿಸಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದನು.

ಹೀಗಾಗಿ ತನಿಖೆ ಕೈಗೊಂಡ ಪೊಲೀಸರು ಈ ಬಗ್ಗೆ ಶರ್ಮಾನ ಗೆಳತಿ ಮೇಘಾಳನ್ನು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಶುಕ್ರವಾರ ತಿಲಕ್ ನಗರ ಪಾರ್ಕ್‍ನಲ್ಲಿ ಈ ಘಟನೆ ನಡೆಯಿತು. ಕುಡಿದ ಮತ್ತಿನಲ್ಲಿದ್ದ ಶರ್ಮಾ ನನಗೆ, ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡಿದ್ದನು ಎಂದು ನಡೆದ ಘಟನೆ ಬಗ್ಗೆ ಬಾಯಿಬಿಟ್ಟಳು.

ಸುಳ್ಳು ದೂರು ನೀಡಿದ್ದಕ್ಕೆ ಶರ್ಮಾ ಹಾಗೂ ಆತನ ಸ್ನೇಹಿತನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಂಡರು. ಸದ್ಯ ಇಬ್ಬರು ಆರೋಪಿಗಳ ಮೇಲೂ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *