ಕಲಬುರಗಿ: ಬಿಸಿಎಂ ವಸತಿ ನಿಲಯದ ಕಟ್ಟಡದ ಕಳಪೆ ಕಾಮಗಾರಿ ಮಾಡಿದ್ದಕ್ಕೆ ಕೆಆರ್‌ಐಡಿಎಲ್(ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿ.) ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.
2016ರಲ್ಲಿ ಬಿಸಿಎಂ ಇಲಾಖೆಯಿಂದ ವಸತಿ ನಿಲಯದ ಕಾಮಗಾರಿ ಪಡೆದ ಕೆಆರ್‌ಐಡಿಎಲ್ ಅವಧಿ ಮುಗಿದಿದ್ದರೂ ಸಹ ಕಟ್ಟಡ ಕಾಮಗಾರಿ ಮುಗಿಸಿರಲಿಲ್ಲ. ಹೀಗಾಗಿ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ್ ಸಂಗಾ ಅವರು ಸ್ಥಳ ಪರಿಶೀಲನೆಗೆ ತೆರಳಿದ್ದರು. ಮದರಸಹಳ್ಳಿಯ ಜಿಡಿಎ ಲೇಔಟ್ ಬಳಿ 3 ಕೋಟಿ 25 ಲಕ್ಷ ವೆಚ್ಚದಲ್ಲಿ ಇಂದಿರಾಗಾಂಧಿ ನರ್ಸಿಂಗ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಸೇರಿದಂತೆ ಕೆಆರ್‌ಐಡಿಎಲ್ ನಿರ್ಮಿಸುತ್ತಿರುವ ಜಿಲ್ಲೆಯ ಒಟ್ಟು 11 ವಸತಿ ನಿಲಯಗಳಿಗೆ ರಮೇಶ್ ಸಂಗಾ ಅವರು ಭೇಟಿ ನೀಡಿದರು.

ಕಟ್ಟಡಗಳ ಕಾಮಗಾರಿ ಕಂಡ ರಮೇಶ್ ಸಂಗಾ ಅವರಿಗೆ ಆಶ್ಚರ್ಯವಾಗಿದೆ. ಒಂದೆಡೆ ಬಹುತೇಕ ಕಟ್ಟದ ಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಇನ್ನೊಂದೆಡೆ ಕಟ್ಟಡ ಛಾವಣಿ ಸಹ ಹಲವೆಡೆ ಸೋರುತ್ತಿವೆ. ಅಷ್ಟೇ ಅಲ್ಲದೆ ಇಡೀ ಕಟ್ಟಡಕ್ಕೆ ಬಳಸಿದ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಡ್ರೈನೇಜ್ ಪೈಪ್‍ಗಳು ಐಎಸ್‍ಐ ಮಾರ್ಕ್ ಹೊಂದಿಲ್ಲ. ವಸತಿ ನಿಲಯದ ಬಹುತೇಕ ಬಾಗಿಲುಗಳು ಕಳಪೆ ಗುಣಮಟ್ಟದ್ದಾಗಿದ್ದು, ಈಗಾಗಲೇ ಅವುಗಳು ಮುರಿಯುವ ಹಂತಕ್ಕೆ ಬಂದಿವೆ.

ಕೈ ಮುಟ್ಟಿದರೆ ಸಾಕು ಕಟ್ಟಡದ ಗೋಡೆಯ ಸಿಮೆಂಟ್ ಕುಸಿದು ಬಿಳುತ್ತಿದೆ. ಹೀಗಿರುವಾಗ ಇದು ವಸತಿಗೆ ಯೋಗ್ಯವಲ್ಲ, ಅವರ ಪ್ರಾಣದ ಜೊತೆ ಚೆಲ್ಲಾಟವಾಡಿ ಬಿಸಿಎಂ ಇಲಾಖೆಗೆ ಕೆಆರ್‌ಐಡಿಎಲ್ ಅಧಿಕಾರಿಗಳು ವಂಚಿಸಿದ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಅಭಿಯಂತರಾದ ಧನ್ಯಕುಮಾರ್ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ಎಲ್.ಜೆ ಪಾಟೀಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಈ ಮೂಲಕ ಕಳಪೆ ಕಾಮಗಾರಿಗೆ ಹೆಸರಾದ ಕೆಆರ್‌ಐಡಿಎಲ್ ಅಧಿಕಾರಿಗಳ ವಿರುದ್ಧ ರಾಜ್ಯದಲ್ಲಿ ಬೇರೆ ಇಲಾಖೆಯಿಂದ ಮೊದಲ ಬಾರಿಗೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

Leave a Reply