ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆ- ಮೋಜು ಮಸ್ತಿಗೆ ಪೊಲೀಸ್ ಬ್ರೇಕ್

ಕೊಪ್ಪಳ: ಹೊಸ ವರ್ಷಕ್ಕೆ ಮದ್ಯ ಅಮಲಿನಲ್ಲಿ ತೇಲಲು ತುದ್ದಿಗಾಲ ಮೇಲೆ ನಿಂತಿದ್ದ ವಿದೇಶಿ ಪ್ರವಾಸಿಗರಿಗೆ ಪೋಲಿಸ್ ಇಲಾಖೆ ಬ್ರೇಕ್ ಹಾಕಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಸ್ಟೋರೆಂಟ್ ಮಾಲೀಕರು ತಯಾರಿ ನಡೆಸಿದ್ದರು. ರೆಸ್ಟೋರೆಂಟ್‍ಗೆ ಬರುವ ಪ್ರವಾಸಿಗರಿಗೆ 2ರಿಂದ 3ಸಾವಿರ ರೂ.ವರೆಗೂ ದರ ನಿಗದಿ ಮಾಡಿದ್ದರು. ಆದರೆ ಸಂಭ್ರಮಾಚರಣೆ ಹೆಸರಿನಲ್ಲಿ ಮೋಜು ಮಸ್ತಿಗೆ ಯಾವುದೇ ಅವಕಾಶ ಇಲ್ಲ ಎಂದು ಡಿವೈಎಸ್‍ಪಿ ಡಾ.ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿರುಪಾಪುರ ಗಡ್ಡೆ ಸುತ್ತಮುತ್ತ 40 ಕ್ಕೂ ಹೆಚ್ಚು ರೆಸ್ಟೋರೆಂಟ್‍ಗಳಿದ್ದು. ಗಡ್ಡಿಯಲ್ಲಿ ಇರುವ ರೆಸಾರ್ಟ್ ಮಾಲೀಕರಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿ ಮಾತನಾಡಿದ ಡಿವೈಎಸ್‍ಪಿ ಡಾ.ಚಂದ್ರಶೇಖರ್ ಅವರು, ಪ್ರತಿವರ್ಷ ಹೊಸವರ್ಷದ ಆಚರಣೆಯನ್ನು ವಿದೇಶಿ ಮಾದರಿಯಲ್ಲಿ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದರೆ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಳೆದ ವರ್ಷ ಕೆಲವು ರೆಸಾರ್ಟ್‍ಗಳ ಮಾಲೀಕರು ಕಾನೂನು ಪ್ರಕಾರ ತಪ್ಪು ಮಾಡಿ ಶಿಕ್ಷೆಯನ್ನು ಅನುಭವಿಸಿದ್ದರು. ಈ ವರ್ಷವೂ ತಪ್ಪು ಮಾಡಿದರೆ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಒಳ್ಳೆಯ ಸಂಪ್ರದಾಯವಿದೆ. ಬೇರೆ ದೇಶದ ಸಂಸ್ಕೃತಿಯನ್ನು ಇಲ್ಲಿ ಆಚರಣೆ ಮಾಡಿದರೆ ತಪ್ಪು. ಏಕೆಂದರೆ ನಿಮಗೆ ಅದು ವ್ಯವಹಾರ ಮಾತ್ರವಷ್ಟೇ. ಆದರೆ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ವಿದೇಶಿಯರಿಗೆ ಬೈಕ್ ನೀಡುವ ಮುನ್ನ ಅವರ ಬಳಿ ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಗಿ ಇರಬೇಕು. ರೆಸಾರ್ಟ್ ಮಾಲೀಕರು ಪರವಾನಗಿ ಇರುವವರಿಗೆ ಮಾತ್ರ ವಾಹನ ನೀಡಿ. ಜೊತೆಗೆ ಹೆಲ್ಮೆಟ್ ನೀಡುವುದು ಕಡ್ಡಾಯ. ಈ ಬಗ್ಗೆ ರೆಸಾರ್ಟ್ ಎದುರು ನಾಮ ಫಲಕ ಹಾಕಬೇಕು. ದೇಶ ಮತ್ತು ವಿದೇಶಿ ಪ್ರವಾಸಿಗರ ಮಾಹಿತಿ ಮತ್ತು ದಾಖಲೆಗಳು ಪಡೆಯಬೇಕು ಎಂದು ನಿಯಮಗಳ ಅರಿವು ಮೂಡಿಸಿದರು.

ದೇಶ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರು ಅರೆನಗ್ನವಾಗಿ ಬಟ್ಟೆ ಧರಿಸಿ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಋಷಿಮುಖ ಪರ್ವತ ಸೇರಿದಂತೆ ಪ್ರಸಿದ್ಧ ದೇವಸ್ಥಾನದಲ್ಲಿ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಮುಜುಗರವಾಗುತ್ತದೆ. ಅನೈತಿಕ ಚಟುವಟಿಕೆಗಳು ಕಂಡು ಬಂದರೆ ಕಾನೂನು ರೀತಿ ಕ್ರಮಕೈಕೊಳ್ಳುತ್ತೇವೆ. ಈಗಾಗಲೇ ವಿರುಪಾಪುರ ಗಡ್ಡಿಯಲ್ಲಿ ಕೆಲವರು ಗಂಜ ಮತ್ತು ಮದ್ಯ ಮಾರಾಟ ಮಾಡಿ ಪೊಲೀಸರ ಕೈಗೆ ಸಿಕ್ಕಿ ಪ್ರಕರಣ ದಾಖಲಾಗಿದೆ. ಮೋಜು ಮಸ್ತಿಗೆ ಯಾವುದೇ ಅವಕಾಶ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಸುರೇಶ್ ತಳವಾರ, ಪಿಎಸ್‍ಐ ದೊಡ್ಡಪ್ಪ.ಜೆ ಸೇರಿದಂತೆ ಇತ್ತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *