ಪಾಠಕ್ಕೂ ಸೈ, ಕೆಲಸಕ್ಕೂ ಸೈ ಎಂದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು

ಮಡಿಕೇರಿ: ಪ್ರತಿದಿನ ಪಠ್ಯಪುಸ್ತಕ, ಕ್ರೀಡಾ ಚಟುವಟಿಕೆಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳು ಶುಕ್ರವಾರ ಕೃಷಿ ಭೂಮಿಗೆ ತೆರಳಿ ಭತ್ತ ಕಟಾವು ಮಾಡಿ ಗದ್ದೆಯಿಂದ ಭತ್ತದ ತೇನೆಹೋತ್ತು ಭತ್ತವನ್ನು ಬಡಿದರು. ಮುಂದೊಂದು ದಿನ ನಾವು ಕಷ್ಟ ಪಟ್ಟು ಭೂಮಿತಾಯಿ ಸೇವೆ ಮಾಡುವುದಾಗಿ ವಿದ್ಯಾರ್ಥಿಗಳು ಆಶಾಭವನೆ ವ್ಯಕ್ತಪಡಿಸಿದರು.

ಹೌದು. ನಿತ್ಯವೂ ಆಟ-ಪಾಠದಲ್ಲೇ ನಿರತರಾಗಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಭತ್ತದ ಗದ್ದೆಯಲ್ಲಿ ದುಡಿದು ಬೆವರಿಳಿಸಿದರು. ಕಿರುಗೂರು ಗ್ರಾಮದ ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳೆಲ್ಲಾರು ಸೇರಿ ಮೊದಲು ಭತ್ತದ ಬೆಳೆಯನ್ನು ಕಟಾವು ಮಾಡಿದರು. ನಂತರ ಅದನ್ನು ಹೊತ್ತು ಒಂದು ಕಡೆಗೆ ಹಾಕಿ ಬಡಿದು ಭತ್ತವನ್ನು ಬೇರ್ಪಡಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಾವೇರಿ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು, ಇಂದಿನ ಆಧುನಿಕ ಯುಗದಲ್ಲಿ ಕೃಷಿ ಚಟುವಟಿಕೆ ಮರೆಯಾಗುತ್ತಿದೆ. ಇರುವ ಅಲ್ಪಸ್ವಲ್ಪ ಕೃಷಿಯನ್ನು ಮಾಡಲು ಯಂತ್ರೋಪಕರಣಗಳು ಬಂದಿವೆ. ಆದ್ದರಿಂದ ಮುಂದಿನ ಪೀಳಿಗೆಗೆ ಕೃಷಿ ಚಟುವಟಿಕೆಯ ಬಗ್ಗೆ ಅರಿವು ಇರಬೇಕು ಎಂಬ ಉದ್ದೇಶದಿಂದ ಹಾಗೂ ರೈತರ ಕಷ್ಟಗಳು ಅರ್ಥವಾಗಬೇಕು ಎಂಬ ಕಾರಣಕ್ಕಾಗಿ ಕೃಷಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಿರುಗೂರು ಗ್ರಾಮದಲ್ಲಿ ನಡೆಯುತ್ತಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಕೃಷಿ ಚಟುವಟಿಕೆಯೊಂದಿಗೆ ಗ್ರಾಮೀಣ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ಪಾಲ್ಗೊಂಡು ಸಖತ್ ಮಜಾ ಮಾಡಿದರು. ಅಳವಿನ ಅಂಚಿನಲ್ಲಿರುವ ಕುಂಟೆಬಿಲ್ಲೆ ಆಟ, ಕಣ್ಣು ಕಟ್ಟಿ ಓಡುವುದು, ಗೋಣಿಚೀಲ ಓಟದಂತಹ ಹತ್ತು ಹಲವು ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಭವಿಷ್ಯದ ಪೀಳಿಗೆಗೆ ಗ್ರಾಮೀಣ ಕ್ರೀಡೆಗಳನ್ನು ರವಾನಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿ ಸಖತ್ ಎಂಜಾಯ್ ಮಾಡಿದರು.

Comments

Leave a Reply

Your email address will not be published. Required fields are marked *