ಕೊಟ್ಟಿಗೆಯಿಂದ ಕರುವನ್ನು ಎಳೆದು ತಂದು ಅರ್ಧ ದೇಹವನ್ನೇ ಕಚ್ಚಿ ತಿಂದ ನಾಯಿಗಳು

ಚಿತ್ರದುರ್ಗ: ಬೀದಿ ನಾಯಿಗಳ ಹಾವಳಿಗೆ ಚಿತ್ರದುರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಇಂದು ಬೆಳ್ಳಂಬೆಳಗ್ಗೆ ಕರುವೊಂದು ನಾಯಿಗಳ ದಾಳಿಗೆ ಬಲಿಯಾಗಿದೆ.

ಜಿಲ್ಲೆಯ ಹಿರಿಯೂರು ನಗರದ ತೇರುಮಲ್ಲೇಶ್ವರ ದೇಗುಲದ ಬಳಿ ಇಂದು ಬೆಳ್ಳಂಬೆಳಗ್ಗೆ ಕರುವೊಂದರ ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದಾಗಿ ತನ್ನ ಮಾಲೀಕನ ಬದುಕಿಗೆ ಆಸರೆಯಾಗಬೇಕಿದ್ದ ಹಸುವಿನ ಕರು ಬದುಕಿನ ಬವಣೆ ಅರಿಯುವ ಮುನ್ನವೇ ಸ್ಥಳದಲ್ಲಿ ಸಾವನ್ನಪ್ಪಿದೆ. ಈ ದಾಳಿಯಲ್ಲಿ ಕರುವಿನ ದೇಹ ಎರಡು ತುಂಡಾಗುವಂತೆ ನಾಯಿಗಳು ಕಚ್ಚಿವೆ. ಅಲ್ಲದೆ ಕರುವಿನ ಹಿಂಬದಿಯ ಅರ್ಧ ದೇಹವನ್ನು ತಿಂದು ತೇಗಿವೆ.

ನಾಯಿಗಳು ಕರುವನ್ನು ಕೊಟ್ಟಿಗೆಯಿಂದ ಎಳೆದು ತಂದು ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಹಿರಿಯೂರು ನಾಗರೀಕರು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಈ ಬೀದಿ ನಾಯಿಗಳ ಹಾವಳಿ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಾಯಿಗಳನ್ನು ಸೆರೆ ಹಿಡಿದು, ಬೇರೆಡೆಗೆ ಸ್ಥಳಾಂತರಿಸುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗಿನ ಜಾವ ಹಾಲು ತರಲು ತೆರಳುವ ಮಕ್ಕಳು, ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಪರಚುತ್ತಿವೆ. ಹೀಗಾಗಿ ಆತಂಕಗೊಂಡ ಜನರು ನಗರ ಸಭೆಗಳ ಅಧಿಕಾರಿಗಳಿಗೆ ಬೀದಿ ನಾಯಿಗಳನ್ನು ಸೆರೆ ಹಿಡಿದು ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ನಾಗರೀಕರ ಕಷ್ಟದ ಬಗ್ಗೆ ಕಾಳಜಿ ವಹಿಸಬೇಕಾದ ನಗರಸಭೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದಲೂ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕೇಳಿ ಬಂದಿದೆ.

Comments

Leave a Reply

Your email address will not be published. Required fields are marked *