ಕೊಡಗಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ – ರೈತರು ಕಂಗಾಲು

ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ಹಾವಳಿ ಮತ್ತೆ ಹೆಚ್ಚಾಗಿದ್ದು, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಆನೆ-ಮಾನವನ ಸಂಘರ್ಷ ಸಾಮಾನ್ಯ ಎಂಬಂತಾಗಿದೆ.

ಜಿಲ್ಲೆಯ ಜನತೆಗೆ ವರ್ಷದ ಆಹಾರ ನೀಡುವ ಕಾಫಿ ಮತ್ತು ಭತ್ತದ ಕೊಯ್ಲಿನ ಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಿಸಿದೆ. ಆನೆಗಳ ಹೆದರಿಕೆಯಿಂದ ಕಾರ್ಮಿಕರು ಕೆಲಸಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಆನೆ ದಾಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 77 ಜನ ಮೃತಪಟ್ಟಿರುವುದು ಆತಂಕ ಹುಟ್ಟಿಸಿದೆ.

ಜಿಲ್ಲೆಯಾದ್ಯಂತ ಈಗ ಅರೆಬಿಕಾ ಕಾಫಿ ಕೊಯ್ಲು ಸೀಸನ್ ಶುರುವಾಗಿದೆ. ಅತಿವೃಷ್ಟಿ ಮಧ್ಯೆಯೂ ಉಳಿದುಕೊಂಡಿರುವ ಕಾಫಿಯನ್ನು ಕೊಯ್ಲು ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಬೆಳೆಗಾರರು ಇದ್ದಾರೆ. ಹಣ್ಣಾದ ಕಾಫಿಯನ್ನು ಸಮಯಕ್ಕೆ ಸರಿಯಾಗಿ ಕೀಳದಿದ್ದರೆ ನೆಲಕ್ಕೆ ಬಿದ್ದು ಹಾಳಾಗುತ್ತದೆ. ವರ್ಷದ ದುಡಿಮೆಯೂ ಕೈ ತಪ್ಪುತ್ತದೆ. ಬಹುತೇಕ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯವೂ ನಡೆಯುತ್ತಿದೆ. ಅಕ್ಕಿ ಜಿಲ್ಲೆಯ ಪ್ರಮುಖ ಆಹಾರ ಬೆಳೆಯೂ ಆಗಿರುವುದರಿಂದ ಕಟಾವು ಕಾರ್ಯ ಆಗಲೇಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಶುರುವಾಗಿರುವ ಕಾಡಾನೆ ಹಾವಳಿ ರೈತರನ್ನು ಕಂಗೆಡೆಸಿದೆ.

Comments

Leave a Reply

Your email address will not be published. Required fields are marked *