ಬೆಂಗಳೂರು: ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಗಮನಸೆಳೆದ ಕ್ಷೇತ್ರ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಕ್ಷೇತ್ರ. ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಆದೇಶವನ್ನು ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಾರದೆ ಅಜ್ಞಾತ ಸ್ಥಳದಲ್ಲಿದ್ದ ಬಿ.ಎನ್ ಬಚ್ಚೇಗೌಡರು ಬುಧವಾರ ತಮ್ಮ ಮಗ ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಜೊತೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸ್ಪರ್ಧಿಸಿದ್ದರು. ಇತ್ತ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ದಿಸಿ ಗೆಲುವು ಸಾದಿಸಿದ್ದರು. ಉಪಚುನಾವಣೆ ಹೊತ್ತಲ್ಲಿ ಅಜ್ಞಾತದಲ್ಲಿದ್ದ ಬಚ್ಚೇಗೌಡರು ಬುಧವಾರ ಮಗ ಶರತ್ ಬಚ್ಚೇಗೌಡರ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹೊಸಕೋಟೆ ಕಸಬಾ ಹೋಬಳಿಯ ಗುಟ್ಟಳ್ಳಿಯಲ್ಲಿ ನಡೆದ ವಿವಿಧ ಯೋಜನೆಗಳ ಭೂಮಿ ಪೂಜೆಯಲ್ಲಿ ಬಿಜೆಪಿ ಸಂಸದ ಶರತ್ ಬಚ್ಚೇಗೌಡರೊಂದಿಗೆ ವೇದಿಕೆ ಹಂಚಿಕೊಂಡಿದ್ದಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ತಮ್ಮ ಮಗ ಚುನಾವಣೆಯಲ್ಲಿ ಪಡೆದಿದ್ದ ಗುರುತು ಕುಕ್ಕರ್ ಗಳನ್ನು ತಂದೆ-ಮಗ ಜೊತೆಯಾಗಿ ಹಂಚಿದರು.
ಉಪಚುನಾವಣೆ ನಂತರ ಎಂಟಿಬಿ ನಾಗರಾಜ್ ತಮ್ಮ ಸೋಲಿಗೆ ಅಪ್ಪ ಮಕ್ಕಳೇ ಕಾರಣ ಎಂದು ಬಿಜೆಪಿ ಹೈಕಮಾಂಡ್ಗೆ ದೂರು ನೀಡಿ ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಉಪಚುನಾವಣೆ ವೇಳೆ ಮಗನ ಪರವಾಗಿ ಬಹಿರಂಗವಾಗಿ ಪ್ರಚಾರಕ್ಕೆ ಬರದ ಬಚ್ಚೇಗೌಡ ಅಜ್ಞಾತ ಸ್ಥಳದಲ್ಲಿ ಕುಳಿತು ಬಿಜೆಪಿ ಮುಖಂಡರನ್ನು ಸಂಪರ್ಕಿಸಿ ಶರತ್ ಪರ ಕೆಲಸ ಮಾಡುವಂತೆ ತಿಳಿಸಿದ್ದರು ಎಂದು ಎಂಟಿಬಿ ದೂರಿದ್ದಲ್ಲದೆ, ಅದಕ್ಕೆ ಆಡಿಯೋ ಸಾಕ್ಷಿ ಇದೆ ಎಂದಿದ್ದರು.

ಒಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಸಂಸದ ಬಚ್ಚೇಗೌಡ ಚುನಾವಣೆ ನಂತರ ಬಹಿರಂಗವಾಗಿ ಮಗನೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿರೋದು ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

Leave a Reply