ಮಹಾರಾಷ್ಟ್ರದಲ್ಲಿ ‘ಶಿವ ಭೋಜನ್’ : 10 ರೂ.ಗೆ ಸಿಗುತ್ತೆ ಊಟ

ಮುಂಬೈ : ಎರಡು ಲಕ್ಷದವರೆಗಿನ ರೈತರ ಸಾಲಮನ್ನಾ ಮಾಡಿದ್ದ ಮಹಾರಾಷ್ಟ್ರ ಸರ್ಕಾರ ಈಗ ಮತ್ತೊಂದು ಮಹತ್ವ ನಿರ್ಧಾರ ತೆಗದುಕೊಂಡಿದೆ. ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ‘ಶಿವ ಭೋಜನ್’ ಆರಂಭಿಸಲು ಚಿಂತಿಸಿದೆ. ಆರಂಭಿಕ ಹಂತದಲ್ಲಿ ಮಹಾರಾಷ್ಟ್ರದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಿವ ಭೋಜನ್ ಆರಂಭಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಆರಂಭದಲ್ಲಿ ಬಡವರು, ನಿರ್ಗತಿಕರು, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆಯಂತಹ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಕ್ಯಾಂಟೀನ್ ನಿರ್ಮಿಸಲು 6.48 ಕೋಟಿ ಹಣವನ್ನು ಆರಂಭಿಕ ಮೂರು ತಿಂಗಳಿಗೆ ಬಿಡುಗಡೆ ಮಾಡಿದೆ.

ಶಿವ ಭೋಜನ್ ಹೆಸರಿನಲ್ಲಿ ಹತ್ತು ರೂಪಾಯಿಗೆ ಊಟ ನೀಡುವ ಉದ್ದೇಶ ಹೊಂದಿರುವ ಈ ಯೋಜನೆಯಲ್ಲಿ ಪ್ರತಿ ಊಟದಲ್ಲಿ ಎರಡು ಚಪಾತಿ, 100 ಗ್ರಾಂ ತರಕಾರಿ ಮಿಶ್ರಿತ ಪಲ್ಯ ಹಾಗೂ 150 ಗ್ರಾಂ ಅನ್ನ ಮತ್ತು ಸಾಂಬರ್ ಒಳಗೊಂಡಿರಲಿದ್ದು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 500 ಪ್ಲೇಟ್ ಊಟದ ವ್ಯವಸ್ಥೆ ಮಾಡಿದೆ. ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಇದಾಗಿದ್ದು ಕೂಡಲೇ ರಾಜ್ಯಾದ್ಯಂತ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರವು ನಗರ ಕೇಂದ್ರಗಳಲ್ಲಿ ಪ್ರತಿ ಪ್ಲೇಟ್‍ಗೆ 40 ರೂ., ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಪ್ಲೇಟ್‍ಗೆ 25 ರೂ.ಗಳ ಸಹಾಯಧನವನ್ನು ಜಿಲ್ಲಾಧಿಕಾರಿಗಳ ಮೂಲಕ ನೇರವಾಗಿ ಮರುಪಾವತಿ ಮಾಡಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು, ಎನ್‍ಜಿಓಗಳ ಮೂಲಕ ಪ್ರಾಯೋಗಿಕವಾಗಿ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಪ್ರಮುಖ ಪ್ರದೇಶಗಳಲ್ಲಿ ವಿಸ್ತರಿಸಲು ಚಿಂತಿಸಿರುವುದಾಗಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *