ಕೆಪಿಸಿಸಿ ಅಧ್ಯಕ್ಷ ಹುದ್ದೆ – ಫೈನಲ್ ರೇಸ್‍ನಲ್ಲಿ ಮೂರು ಹೆಸರು

ನವದೆಹಲಿ: ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಮೂವರು ರಾಜ್ಯ ನಾಯಕರ ಹೆಸರುಗಳನ್ನ ಮಧುಸೂಧನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡ ಎಐಸಿಸಿಗೆ ಶಿಫಾರಸು ಮಾಡಿದೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್, ರಾಜ್ಯಸಭಾ ಸಂಸದ ಬಿ.ಕೆ ಹರಿಪ್ರಸಾದ್, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಹೆಸರು ಶಿಫಾರಸು ಮಾಡಲಾಗಿದೆ.

ಕಳೆದ ವಾರ ರಾಜ್ಯದಲ್ಲಿ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದ ಮಧುಸೂಧನ್ ಮಿಸ್ತ್ರಿ, ಭಕ್ತ ಚರಣ್‍ದಾಸ್ ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯ ಗಾಂಧಿಗೆ ವರದಿ ನೀಡಿದ್ದಾರೆ. ಅಲ್ಲದೇ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆಯೂ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

ಜನವರಿ ಮೊದಲ ವಾರದಲ್ಲಿ ಸೋನಿಯಾ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜನವರಿ 1 ಅಥವಾ 2ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ. ಈಗಾಗಲೇ ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಅಂತಿಮ ನಿರ್ಧಾರವನ್ನು ಸೋನಿಯಗಾಂಧಿ ಮುಂದೆ ಸಿದ್ದರಾಮಯ್ಯ ಹೇಳಲಿದ್ದಾರೆ. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನ ಆಯ್ಕೆ ಮಾಡುವ ಸಂಬಂಧ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುನಿಯಪ್ಪ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದು, ದೆಹಲಿಯಲ್ಲಿ ಹೈಕಮಾಂಡ್ ನಾಯರನ್ನು ಭೇಟಿಯಾಗುತ್ತಿದ್ದಾರೆ. ಎ.ಕೆ ಆಂಟನಿ, ಗುಲಾಂ ನಬಿ ಅಜಾದ್, ಅಂಬಿಕಾ ಸೋನಿ ಭೇಟಿಯಾಗಿರುವ ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *