ಹೆಚ್ಚು ಜನ ಸಭೆ ನಡೆಸುತ್ತಾರಷ್ಟೇ, ಯಾವುದೇ ಮೆರವಣಿಗೆಗೆ ಅವಕಾಶ ನೀಡಿಲ್ಲ- ಭಾಸ್ಕರ್ ರಾವ್

– ಮೆರವಣಿಗೆಗೆ ಅವಕಾಶ ಕೇಳಿಲ್ಲ, ನೀಡಿಯೂ ಇಲ್ಲ
– ಅಂಗಡಿ ಬಂದ್ ಮಾಡಲು ಅನುಮತಿ ನೀಡಿಲ್ಲ,
– ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆ ಶಾಂತಿ ಸಭೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆ ಸೋಮವಾರ ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಒಂದು ಲಕ್ಷ ಜನ ಸೇರಲಿದ್ದಾರೆ. ಹೀಗಾಗಿ ಸುತ್ತಮುತ್ತ ಹೆಚ್ಚು ಸಂಚಾರ ದಟ್ಟಣೆ ಸಂಭವಿಸುವ ಸಾಧ್ಯತೆ ಇದೆ.

ಈ ಕುರಿತು ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಾಳೆ ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಎನ್‍ಆರ್ ಸಿ ಹಾಗೂ ಸಿಎಎ ಖಂಡಿಸಿ ಡಿ.21ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಸಿಎಂ ಸಭೆ ನಡೆಸಿ ಮನವೊಲಿಸಿದ್ದಾರೆ. ಪ್ರತಿಭಟನೆ ನಡೆಸುವುದಿಲ್ಲ ಶಾಂತಿ ಸಭೆ ನಡೆಸುತ್ತೇವೆ ಎಂದು ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿ ಕ್ರಮ ಕೈಗೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗಿಯಾಗುವ ಸಾಧ್ಯತೆಯಿದೆ. ದರ್ಗಾಕ್ಕೆ ಬರಲು ಐದು ದಾರಿಗಳಿದ್ದು, ಬಹಳ ವ್ಯಾಪಕವಾದ ಸಂಚಾರಿ ವ್ಯವಸ್ಥೆ ಮಾಡಲಾಗುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ ನಾವೂ ಸಹ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೆ ಅಗ್ನಿಶಾಮಕ ದಳ, ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿ ಒಂದು ಸಾವಿರ ಕ್ಯಾಮೆರಾ ಹಾಕಲಾಗಿದೆ ಎಂದರು.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಮುದಾಯದ ಎಲ್ಲ ಮುಖಂಡರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದರೆ ಸಂಬಂಧ ಪಟ್ಟ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ನಾಳೆ ಸಾರ್ವಜನಿಕರು ಆ ರಸ್ತೆಯಲ್ಲಿ ಸಂಚರಿಸದಂತೆ ಈ ಮೂಲಕ ಮನವಿ ಮಾಡುತ್ತೇವೆ. 60 ಸಿಎಆರ್, 56 ಕೆಎಸ್‍ಆರ್‍ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಎಲ್ಲ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಮುಸ್ಲಿಂ ಮುಖಂಡರು ಮೆರವಣಿಗೆಗೆ ಅವಕಾಶ ಕೇಳಿಲ್ಲ, ನಾವು ನೀಡಿಯೂ ಇಲ್ಲ. ಅಂಗಡಿ ಬಂದ್ ಮಾಡುವ ಬಗ್ಗೆ ಸಹ ಅನುಮತಿ ನೀಡಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಚಾಲ್ತಿಯಲ್ಲಿರುತ್ತವೆ. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Comments

Leave a Reply

Your email address will not be published. Required fields are marked *