ಬದುಕಿಗೆ ಹತ್ತಿರಾಗೋ ನಗೆಬುಗ್ಗೆಯ ಸುವರ್ಣಾವಕಾಶ!

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾರುಕಟ್ಟೆ ವಲಯದಲ್ಲಿ ಸಾರ್ವಜನಿಕರಿಗೆ ಸುವರ್ಣಾವಕಾಶವೆಂಬ ಸ್ಲೋಗನ್ನು ಚಿರಪರಿಚಿತ. ಹೀಗೆ ಸಾರ್ವಜನಿಕರಿಗೆ ಸುವರ್ಣಾವಕಾಶದ ಆಮಿಷವೊಡ್ಡುತ್ತಲೇ ಆಸೆಯ ಬಲೂನಿನ ಮೈಗೆ ಬ್ಲೇಡು ಗೀರುವಂಥಾ ಘಟನಾವಳಿಗಳೂ ಯಥೇಚ್ಛವಾಗಿಯೇ ನಡೆಯುತ್ತಿರುತ್ತವೆ. ಹಾಗಾದರೆ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂದೇ ಶೀರ್ಷಿಕೆ ಇಟ್ಟುಕೊಂಡಿರುವ ಈ ಚಿತ್ರದಲ್ಲಿ ಯಾವ ಥರದ ಕಥೆಯಿದೆ ಎಂಬಂಥ ಕುತೂಹಲ ಹುಟ್ಟಲು ಕಾರಣವಾಗಿದ್ದದ್ದು ಸಹ ಅಂಥಾ ವಾತಾವರಣವೇ. ಇದೀಗ ಈ ಸಿನಿಮಾ ತೆರೆ ಕಂಡಿದೆ. ಬದುಕಿಗೆ ಹತ್ತಿರಾದ ಕಥೆಯನ್ನು ನಗೆಬುಗ್ಗೆಗಳೊಂದಿಗೆ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಪ್ರೇಕ್ಷಕರಿಗೆಲ್ಲ ಲಭಿಸಿದೆ.

ಒಂದು ಸಾದಾ ಸೀದಾ ಕಥಾ ಎಳೆಯನ್ನು ಸಾಧ್ಯಂತವಾಗಿ ಪ್ರೇಕ್ಷಕರನ್ನು ಖುಷಿಗೊಳಿಸುವಂತೆ ರೂಪಿಸಿರುವುದೇ ಈ ಚಿತ್ರದ ಪ್ಲಸ್ ಪಾಯಿಂಟ್. ಪ್ರೇಕ್ಷಕರು ಎಂತೆಂಥಾ ನಿರೀಕ್ಷೆಗಳನ್ನಿಟ್ಟುಕೊಂಡು ಸಿನಿಮಾ ನೋಡಲು ಹೋಗುತ್ತಾರೆಣಂಬ ಸೂಕ್ಷ್ಮವನ್ನು ಅರಿತುಕೊಂಡೇ ನಿರ್ದೇಶಕ ಅನೂಪ್ ರಾಮಸ್ವಾಮಿ ದೃಷ್ಯ ಕಟ್ಟಿದ್ದಾರೆ. ಇಡೀ ಸಿನಿಮಾ ಪ್ರೇಕ್ಷಕರನ್ನು ತೃಪ್ತಗೊಳಿಸುವಂಥಾ ಅಂಶಗಳೊಂದಿಗೆ ನಳನಲೀಸುವಂತೆ ಮೂಡಿ ಬಂದಿರೋದೇ ಆ ಕಾರಣಗಳಿಂದ. ನಾಯಕನಾಗಿ ನಟಿಸಿರುವ ರಿಷಿ ತಾನೊಬ್ಬ ಸಮರ್ಥ ನಟ ಅನ್ನೋದನ್ನು ಪ್ರತೀ ಫ್ರೇಮಿನಲ್ಲಿಯೂ ಸಾಬೀತುಗೊಳಿಸುವಂತೆ ಕಾಣಿಸಿಕೊಂಡಿದ್ದಾರೆ. ಒಂದಕ್ಕೊಂದು ಪೂರಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ಟ್ವಸ್ಟುಗಳೊಂದಿಗೆ ನಗುವಿನ ಜೊತೆ ಜೊತೆಗೇ ಸಾಗುವ ದೃಷ್ಯಾವಳಿಗಳಿಂದ ಈ ಸಿನಿಮಾ ಸಮೃದ್ಧವಾಗಿದೆ.

ರಿಷಿ ಎಲ್ಲರಿಂದಲೂ ವೇದ್ ಅಂತ ಕರೆಸಿಕೊಳ್ಳೋ ವೇದಾಂತ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅದು ಮಧ್ಯಮ ವರ್ಗದ ಬದುಕಿನ ಖುಷಿ, ಕಸಿವಿಸಿಗಳನ್ನು ಆವಾಹಿಸಿಕೊಂಡಂತಿರುವ ಪಾತ್ರ. ವೇದ ಇಲ್ಲಿ ಯಾವುದೋ ಒಂದು ಸಮಸ್ಯೆಯ ಬೆನ್ನತ್ತಿ ಹೊರಡುತ್ತಾನೆ. ಒಂದು ಕನಸಿಟ್ಟುಕೊಂಡು ಆ ಹಾದಿಯಲ್ಲಿದುರಾಗೋ ಸವಾಲುಗಳನ್ನು ಎದುರಿಸುತ್ತಾ ಸಾಗುತ್ತಾನೆ. ಹೀಗೆ ಆತ ತನ್ನ ಕನಸನ್ನು ನನಸು ಮಾಡಿಕೊಳ್ಳೋದಕ್ಕಾಗಿ ಸಾರ್ವಜನಿಕರಿಗೊಂದು ಸುವರ್ಣಾವಕಾಶವನ್ನು ಕಲ್ಪಿಸುತ್ತಾನೆ. ಅದೇನೆಂಬುದು ಸಿನಿಮಾದ ಪ್ರಧಾನ ಅಂಶ. ಅದನ್ನು ಚಿತ್ರ ಮಂದಿರಗಳಲ್ಲಿಯೇ ಕಣ್ತುಂಬಿಕೊಳ್ಳೋದು ಉತ್ತಮ.

ಹೀಗೆ ಯಾವುದೋ ಸಮಸ್ಯೆಯ ಬೆಂಬಿದ್ದು ಮತ್ಯಾವುದೋ ಕನಸು ಕಟ್ಟಿಕೊಂಡು ಮುಂದುವರೆಯೋ ವೇದಾಂತನ ಯಾನದ ತುಂಬಾ ನಗುವಿದೆ. ಭಾವುಕಗೊಳಿಸುವಂಥಾ ಸನ್ನಿವೇಷಗಳಿವೆ. ಸಂಬಂಧಗಳ ಮಹತ್ವ ಸಾರುವಂಥಾ ಅಂಶಗಳೊಂದಿಗೆ ಮುದ್ದಾದೊಂದು ಪ್ರೇಮ ಕಥಾನಕವೂ ಇದೆ. ಇದೆಲ್ಲ ಯಾವ್ಯಾವ ತಿರುವು ಪಡೆದುಕೊಂಡರೂ ಕೂಡಾ ಇಲ್ಲಿ ನಗೆಬುಗ್ಗೆಗಳು ಸದಾ ನಳನಳಿಸುತ್ತಿರುತ್ತವೆ. ನಾಯಕನಾಗಿ ರಿಷಿ ಭರ್ಜರಿಯಾಗಿ ನಟಿಸುತ್ತಾ ಆಕ್ಷನ್ ಸನ್ನಿವೇಷಗಳಲ್ಲಿಯೂ ಮಿಂಚಿದ್ದಾರೆ. ಪ್ರೇಮಿಯಾಗಿಯೂ ಆಪ್ತಚವಾಗುತ್ತಾರೆ. ಧನ್ಯಾ ಬಾಲಕೃಷ್ಣ ಜಾನು ಎಂಬ ಮಹತ್ವಪೂಣವಾದ ಪಾತ್ರದೊಂದಿಗೆ ರಿಷಿಗೆ ಜೋಡಿಯಾಗಿದ್ದಾರೆ.

ಇಲ್ಲಿ ಪಾತ್ರ ಪೋಷಣೆಯೇ ಇಡೀ ಸಿನಿಮಾದ ಜೀವಾಳವಾಗಿ ಕಾಣಿಸುತ್ತದೆ. ರಿಷಿ ಮತ್ತು ಧನ್ಯಾ ರಾಮಕೃಷ್ಣ ಮುದ್ದಾಗಿ ನಟಿಸಿದ್ದಾರೆ. ದತ್ತಣ್ಣನ ಪಾತ್ರ ಆಹ್ಲಾದ ತುಂಬಿಸುತ್ತಲೇ ಭಾವುಕರನ್ನಾಗಿಸುತ್ತದೆ. ರಂಗಾಯಣ ರಘು, ಮಿತ್ರಾ ಪಾತ್ರಗಳೂ ಕೂಡಾ ಕಾಡುವಂತೆ ಮೂಡಿ ಬಂದಿದೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸಾರ್ವಜನಿಕರಿಗೆ ಭರ್ಜರಿ ಸುವರ್ಣಾವಕಾಶವನ್ನೇ ನಿರ್ಮಾಣ ಮಾಡಿದ್ದಾರೆ. ಅನೂಪ್ ರಾಮಸ್ವಾಮಿ ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕರಾಗಿ ಭರವಸೆ ಹುಟ್ಟಿಸಿದ್ದಾರೆ.

ರೇಟಿಂಗ್ : 3.5 / 5

Comments

Leave a Reply

Your email address will not be published. Required fields are marked *