ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ – ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

– ಶನಿವಾರ ಅಮಿತ್ ಶಾ, ಬಿಎಸ್ ವೈ ಉಡುಪಿ ಭೇಟಿ ಸಾಧ್ಯತೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜಕೀಯ ನಾಯಕರು, ಭಕ್ತರು, ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಅಮಿತ್ ಶಾ, ಸಿಎಂ ಯಡಿಯೂರಪ್ಪ ಉಡುಪಿಗೆ ಬರುವ ಸಾಧ್ಯತೆಯಿದೆ. ಆಸ್ಪತ್ರೆ ಸುತ್ತ ಝೀರೋ ಜೋನ್ ನಿರ್ಮಾಣ ಮಾಡಲಾಗಿದೆ.

ಇಂದು ಬೆಳಗ್ಗೆ 5 ಗಂಟೆಗೆ ಕೆಎಂಸಿ ಆಸ್ಪತ್ರೆಯ ಕಸ್ತೂರಬಾ ಬ್ಲ್ಯಾಕ್‍ನಲ್ಲಿ ದಾಖಲಾಗಿದ್ದರು. ಬಳಿಕ ಅವರನ್ನು ಐಸಿಯುನಲ್ಲಿ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗ್ಗಿನಿಂದಲೂ ಭಕ್ತರು ಆಸ್ಪತ್ರೆ ಬಳಿ ಬಂದು ಸ್ವಾಮೀಜಿಯ ಆರೋಗ್ಯ ವಿಚಾರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸ್ವಾಮೀಜಿ ಅವರಿಗೆ ಹಾರ್ನಿಯಾ ಆಪರೇಶನ್ ಆಗಿತ್ತು. ಬಳಿಕ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಆದರೆ ಈಗ ಅವರು ಶ್ವಾಸಕೋಶಕ್ಕೆ ಸಂಬಂಧಪಟ್ಟಂತ ಕೆಲ ಸೋಂಕಿಗೆ ಅವರು ಒಳಗಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

48 ಗಂಟೆಗಳ ಕಾಲ ನಿರಂತರವಾಗಿ ಸ್ವಾಮೀಜಿ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲಾದ ನಂತರ ಇಲ್ಲಿ ಯಾರು ಬರಬಾರದು ಎಂದು ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿ ಬ್ಯಾರಿಕೇಡ್‍ಗಳನ್ನು ಹಾಕಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ಝೀರೋ ಜೋನ್ ಮಾಡಲಾಗಿದೆ. ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲಾದಾಗಿನಿಂದ ಇವರೆಗೂ ಕೃತಕ ಉಸಿರಾಟಕ್ಕೆ ಅವರು ಸ್ಪಂದಿಸುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *